

‘ಪುಷ್ಪ 2: ದ ರೂಲ್’ ಚಿತ್ರದ ‘ಕಿಸ್ ಕಿಸಕ್’ ವಿಶೇಷ ಹಾಡಿನ ನೃತ್ಯದ ಬಳಿಕ ನಟಿ ಶ್ರೀಲೀಲಾ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ. ಕನ್ನಡ, ತೆಲುಗು ಚಿತ್ರರಂಗದಲ್ಲಿ ಮಿಂಚಿರುವ ಅವರು, ‘ಪುಷ್ಪ-2’ ಬಳಿಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ಗೂ ಎಂಟ್ರಿಯಾಗಿದ್ದಾರೆ. ಕಾರ್ತಿಕ್ ಆರ್ಯನ್ ಅಭಿನಯದ ‘ಆಶಿಕಿ-3’ ಮೂಲಕ ಹಿಂದಿ ಚಿತ್ರರಂಗಕ್ಕೆ ಡೆಬ್ಯೂ ಮಾಡಿರುವ ಶ್ರೀಲೀಲಾ, ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಆರಂಭವಾಗಿವೆ. ಇದೇ ದೀಪಾವಳಿಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ. ಈ ಮಧ್ಯೆ, ಹಿಂದಿ ಚಿತ್ರಕ್ಕೆ ಶ್ರೀಲೀಲಾ ಸಂಭಾವನೆಯನ್ನು ಇಳಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿಹಾಡುತ್ತಿದೆ. ‘ಆಶಿಕಿ-3’ ಸಿನಿಮಾಕ್ಕೆ ಶ್ರೀಲೀಲಾ 2 ಕೋಟಿ ರೂ. ಸಂಭಾವನೆ ಪಡೆದಿದ್ದು, ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಇದು ಕಡಿಮೆಯಾಗಿದೆ. ‘ಪುಷ್ಪ-2’ ಚಿತ್ರದ ‘ಕಿಸಕ್’ ಹಾಡು ಹಾಗೂ ‘ರಾಬಿನ್‌ಹುಡ್’ ಚಿತ್ರಕ್ಕೆ ಬರೋಬ್ಬರಿ ₹ 3 ಕೋಟಿ ಪಡೆದಿದ್ದರು. ಕಲಾವಿದರು ಒಂದು ಸಿನಿಮಾದ ಯಶಸ್ಸಿನ ಬಳಿಕ ಮತ್ತೊಂದು ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಳ್ಳುವುದು ವಾಡಿಕೆ. ಆದರೆ, ಶ್ರೀಲೀಲಾ ಮಾತ್ರ ಸಂಭಾವನೆ ಇಳಿಸಿಕೊಂಡಿರುವುದು ಯಾಕೆ ಎಂಬುದು ಚರ್ಚೆಗೀಡಾಗಿದೆ. ಬಾಲಿವುಡ್‌ನಲ್ಲಿ ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ನಟಿ ಈ ಮಾರ್ಗ ಅನುಸರಿಸಿರಬಹುದು ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಶ್ರೀಲೀಲಾ ಎಲ್ಲಿಯೂ ಮಾತನಾಡಿಲ್ಲ. ಇನ್ನು ಉಳಿದಂತೆ, ಅವರು ಕನ್ನಡದ ‘ಜೂನಿಯರ್’, ತೆಲುಗಿನ ‘ಮಾಸ್ ಜಾತರ’, ‘ಲೆನಿನ್’, ತಮಿಳಿನ ‘ಪರಾಶಕ್ತಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. -ಏಜೆನ್ಸೀಸ್