ಶ್ರೀಭರತ ಬಾಹುಬಲಿಗೆ ಉಪ್ಪಿ-ಯಶ್ ಸ್ಪೂರ್ತಿ ಮಂಜು ಮಾಂಡವ್ಯ ಈಗ ಹೀರೋ

barata-bahubali 10 JAN 20
Published on

‘ನನ್ನನ್ನು ಚಿತ್ರರಂಗಕ್ಕೆ ಕರೆತಂದಿದ್ದೇ ಉಪೇಂದ್ರ ಅವರು. ಅವರ ನಿರ್ದೇಶನದ ‘ಎ’ ಸಿನಿಮಾನೇ ಎಲ್ಲದಕ್ಕೂ ಸ್ಪೂರ್ತಿ. ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಬಿಡುಗಡೆ ಆಗಿದ್ದ ಚಿತ್ರವದು. ನಂತರ ಚಿತ್ರರಂಗಕ್ಕೆ ಬಂದಮೇಲೆ ಅವರನ್ನೇ ಬ್ಲೈಂಡ್ ಆಗಿ ಫಾಲೋ ಮಾಡಿದೆ. ಅವರಂತೆ ಸಾಹಿತ್ಯ ಬರೆದೆ, ಸಂಭಾಷಣೆ ಬರೆದೆ, ಆಕ್ಟಿಂಗೂ ಮಾಡಿದೆ, ಗೀತೆಯನ್ನೂ ಹಾಡಿದೆ, ಈಗ ಹೀರೋ ಕೂಡ ಆಗಿದ್ದೇನೆ. ಒಟ್ಟಿನಲ್ಲಿ ಅವರು ಮಾಡಿದಂತೆಲ್ಲ ನಾನೂ ಮಾಡಿದೆ..’ ಹೀಗೆಂದು ‘ಶ್ರೀಭರತ ಬಾಹುಬಲಿ’ ಚಿತ್ರದ ಬಗ್ಗೆ ಹೇಳಿಕೊಂಡವರು ನಟ-ನಿರ್ದೇಶಕ ಮಂಜು ಮಾಂಡವ್ಯ.

ಇವರು ಪ್ರಪ್ರಥಮ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು. ಈ ಸಿನಿಮಾದ ಪ್ರಮುಖ ಸನ್ನಿವೇಶವೊಂದಕ್ಕೆ ಉಪೇಂದ್ರ ಅವರು ಧ್ವನಿ ನೀಡಿದ್ದಾರೆ ಎನ್ನುತ್ತ ಯಶ್ ಕುರಿತು ಮಾತನಾಡಿದರು ಮಂಜು. ‘ರಾಜಾಹುಲಿ ಚಿತ್ರಕ್ಕೆ ರೈಟರ್ ಆಗಿದ್ದೆ. ಆಮೇಲೆ ನಾನು ನಿರ್ದೇಶಕ ಆಗಲು ಯಶ್ ಕಾರಣ. ಅದೇ ಮುಂದೆ ‘ಮಾಸ್ಟರ್ ಪೀಸ್’ ಆಯಿತು’ ಎಂದು ನಿರ್ದೇಶಕರಾದ ಬಗೆಯನ್ನೂ ಹೇಳಿಕೊಂಡರು.

‘ಐಶ್ವರ್ಯ ಫಿಲಮ್ ಪ್ರೊಡಕ್ಷನ್ಸ್’ ಬ್ಯಾನರ್​ನಲ್ಲಿ ಶಿವಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಮಂಜು ಮಾಂಡವ್ಯ-ಚಿಕ್ಕಣ್ಣ ಅವರು ಭರತ-ಬಾಹುಬಲಿ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಆಕ್ಷನ್-ಕಟ್ ಹೇಳುವ ಜತೆಗೆ ಈ ಚಿತ್ರದಲ್ಲಿ ಗೀತೆಯೊಂದನ್ನೂ ಹಾಡಿದ್ದಾರೆ. ‘ಈ ಚಿತ್ರದ ನಿಜವಾದ ಹೀರೋ ನಿರ್ವಪಕರು. ನಾನು ಸ್ಟಾರ್ ಅಲ್ಲದಿದ್ದರೂ ನನ್ನ ಮೇಲೆ ಕೋಟಿಗಟ್ಟಲೆ ಬಂಡವಾಳ ಹೂಡಿದ್ದಾರೆ. ನನಗೆ ನಿರ್ವಪಕರು ಪೂರ್ತಿ ಸ್ವಾತಂತ್ರ್ಯ ಕೊಟ್ಟಿದ್ದರಿಂದ ಈಗ ಚಿತ್ರ ನಿರ್ವಣದ ಬಗ್ಗೆ ಪುಸ್ತಕ ಬರೆಯುವಷ್ಟು ಅನುಭವ ಆಗಿದೆ’ ಎಂದರು ಮಂಜು.

‘ನಾನು ಮೂಲತಃ ಕೊಡಗಿನವಳು. ಇದು ನನ್ನ ಮೊದಲ ಸಿನಿಮಾ. ಆಡ್ ಶೂಟ್​ನಲ್ಲಿ ನನ್ನನ್ನು ನೋಡಿ ನಿರ್ದೇಶಕರು ಈ ಅವಕಾಶ ಕೊಟ್ಟಿದ್ದಾರೆ’ ಎಂದರು ನಾಯಕಿ ಸಾರಾ ಹರೀಶ್. ‘ನಾನು ಹಾಗೂ ಮಂಜು ಸಿನಿಮಾದಲ್ಲಷ್ಟೇ ಅಲ್ಲ, ನಿಜಜೀವನದಲ್ಲೂ ಸ್ನೇಹಿತರು. ಮಂಜು ಹೀರೋ ಆಗುತ್ತೇನೆ ಎಂದಾಗ ಇದೆಲ್ಲ ಬೇಕಾ? ಎಂದು ಕೇಳಿದ್ದೆ. ಆದರೆ ಚಿತ್ರದಲ್ಲಿ ಅವರು ನಿಜವಾಗಿಯೂ ಚೆನ್ನಾಗಿ ಮಾಡಿದ್ದಾರೆ’ ಎಂದರು ಚಿಕ್ಕಣ್ಣ. ‘ಇದು ನನ್ನ ಮೊದಲ ಸಿನಿಮಾ. ಸಿನಿಮಾ ಮಾಡುವ ಆಸಕ್ತಿ ಇರಲಿಲ್ಲ. ಆದರೆ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದೆ’ ಎಂದರು ನಿರ್ವಪಕ ಶಿವಪ್ರಕಾಶ್. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಪರ್ವೆಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net