

ಶ್ರದ್ಧಾ ಶ್ರೀನಾಥ್ ಮನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೋಗಿದ್ದರಂತೆ, ಕರೊನಾ ಸೋಂಕು ಹರಡಬಹುದು ಎಂಬ ಭಯದಲ್ಲಿ ಸ್ವಯಂ-ದಿಗ್ಬಂಧನದಲ್ಲಿ ಇರುವುಂತೆ ಹೇಳಿದರಂತೆ, ಅಧಿಕಾರಿಗಳ ಮಾತನ್ನು ಶ್ರದ್ಧಾ ಶ್ರದ್ಧೆಯಿಂದ ಅನುಸರಿಸುತ್ತಿದ್ದಾರಂತೆ …
ಇಂಥದ್ದೊಂದು ಅಂತೆ-ಕಂತೆಗಳನ್ನು ಅದ್ಯಾರು, ಯಾವಾಗ ಹಬ್ಬಿಸಿದರೋ ಗೊತ್ತಿಲ್ಲ, ಅದರಿಂದ ಶ್ರದ್ಧಾಗೆ ಮಾತ್ರ ಬೇಸರವಾದಂತಿದೆ. ಅದೇ ಕಾರಣಕ್ಕೆ ಅವರು ನೇರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ‘ಸುಳ್ಳು ಸುದ್ದಿ ಮತ್ತು ಸೋಂಕು ಹಬ್ಬಿಸಬೇಡಿ, ಎರಡೂ ಅಪಾಯ …’ ಎಂದು ಶ್ರದ್ಧಾ ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು ಎಂದರೆ, ಮಾರ್ಚ್ 12ರಿಂದ 15ರವರೆಗೂ ಚೆನ್ನೈ, ಹೈದರಾಬಾದ್‌ಗೆ ಶ್ರದ್ಧಾ ಹೋಗಿ ಬಂದಿದ್ದಾರೆ. ಅವರು ವಾಪಸ್ಸು ಬಂದ ನಂತರ, ಅಂತೆ-ಕಂತೆಗಳು ಶುರುವಾಗಿವೆ. ಆ ಫ್ಲೈಟ್ಗಳಲ್ಲಿ ಸೋಂಕು ಹರಡಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ ಮನೆಗೆ ಹೋಗಿದ್ದರು, ಶ್ರದ್ಧಾಗೆ ದಿಗ್ಬಂಧನದಲ್ಲಿರುವಂತೆ ಹೇಳಿದರು ಎಂಬಂತಹ ಸುದ್ದಿಗಳು ಕೇಳಿ ಬಂದಿವೆ.
ಇದಕ್ಕೆ ಪ್ರತಿಕ್ರಯಿಸಿರುವ ಶ್ರದ್ಧಾ, ‘ನಾನು ಫ್ಲೈಟ್‌ನಲ್ಲಿ ಪ್ರಯಾಣ ಮಾಡಿದ್ದು ನಿಜ. ಆದರೆ, ಅಲ್ಲಿ ಯಾರೂ ಸೋಂಕಿತರು ಇರಲಿಲ್ಲ. ಹಾಗೆಯೇ ನಮ್ಮನೆಗೆ ಆರೋಗ್ಯ ಇಲಾಖೆಯ ಯಾವ ಅಧಿಕಾರಿಗಳು ಸಹ ಬಂದಿರಲಿಲ್ಲ. ಆದರೂ ನನ್ನ ಕಸಿನ್ ಡಾಕ್ಟರ್ ಒಬ್ಬರ ಸಲಹೆಯ ಮೇರೆಗೆ, ನನಗೆ ನಾನೇ ದಿಗ್ಬಂಧನ ಹಾಕಿಕೊಂಡೆ. ಮುಂಜಾಗ್ರತಾ ಕ್ರಮವಾಗಿ ಮತ್ತು ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಎಲ್ಲರಿಂದ 14 ದಿನಗಳ ಕಾಲ ದೂರ ಉಳಿದೆ. ಸ್ವಯಂ ದಿಗ್ಬಂಧನ, ಮಾರ್ಚ್ 29ಕ್ಕೆ ಮುಕ್ತಾಯವಾಯಿತು. ಆ ನಂತರ ಮನೆಯವರ ಜತೆಗೆ ಇದ್ದೇನೆ’ ಎಂದು ಶ್ರದ್ಧಾ ಟ್ವೀಟ್ ಮಾಡಿದ್ದಾರೆ.
ಅಡುಗೆ ಮನೆಯಲ್ಲಿ ತಮ್ಮ ತಾಯಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಶ್ರದ್ಧಾ, ‘ಎಲ್ಲರೂ ಸೇಫ್ ಆಗಿರಿ. ಯಾರೂ ಸೋಂಕು ಮತ್ತು ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ. ಎರಡೂ ಅಪಾಯಕಾರಿ’ ಎಂದು ಶ್ರದ್ಧಾ ತಮ್ಮ ಮಾತು ಮುಗಿಸಿದ್ದಾರೆ.