

ದಸರಾ ಹಬ್ಬದ ವಿಶೇಷ ಕೊಡುಗೆ ಎಂಬಂತೆ ಬಾಲಿವುಡ್ ನಟಿಮಣಿಯರು ಸಾಲಾಗಿ ಕಾರುಗಳ ಶಾಪಿಂಗ್ ಮಾಡಿದ್ದಾರೆ. ನವರಾತ್ರಿ ಸಡಗರದಲ್ಲಿ ನಟಿಯರಾದ ಶ್ರದ್ಧಾ ಕಪೂರ್, ಪೂಜಾ ಹೆಗ್ಡೆ ಮತ್ತು ಆಲಿಯಾ ಭಟ್ ಕೋಟಿ ಕೋಟಿ ಬೆಲೆಯ ಐಶಾರಾಮಿ ಕಾರುಗಳನ್ನು ಖರೀದಿ ಮಾಡಿದ್ದಾರೆ.
ಶ್ರದ್ಧಾ 4.77 ಕೋಟಿ ರೂ. ಕಾರು
‘ಆಶಿಕಿ 2’, ‘ಸೀ’, ‘ಬಾಘೀ’, ‘ಸಾಹೋ’ ಸೇರಿ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಶ್ರದ್ಧಾ ಕಪೂರ್, ಲ್ಯಾಂಬರ್ಘಿನಿ ಹುರಕಾನ್ ಟೆಕ್ನಿಕಾ ಕಾರು ಖರೀದಿಸಿದ್ದಾರೆ. ಗಂಟೆಗೆ ಬರೋಬ್ಬರಿ 325 ಕಿಮೀ ಸ್ಪೀಡ್ನಲ್ಲಿ ಚಲಿಸುವ ಸಾಮರ್ಥ್ಯವಿರುವ ಈ ಕಾರಿನ ಬೆಲೆ 4.77 ಕೋಟಿ ರೂ. ಎನ್ನಲಾಗಿದೆ. ಈ ಕಾರ್ ಅಲ್ಲದೇ ಶ್ರದ್ಧಾ ಬಳಿ ಆಡಿ ಕ್ಯೂ7, ಮರ್ಸಿಡೀಸ್ ಬೆಂಜ್ ಎಂಎಲ್, ಮರ್ಸಿಡೀಸ್ ಬೆಂಜ್ ಜಿಎಲ್ಎ, ಬಿಎಂಡಬ್ಲ್ಯೂ 7 ಸಿರೀಸ್, ಟೊಯೋಟಾ ಫಾರ್ಚೂನರ್ ಸೇರಿ ಹಲವು ಕಾರುಗಳಿವೆ. ಈ ವರ್ಷ ‘ತೂ ಜೂಠಿ ಮೈ ಮಕ್ಕಾರ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರದ್ಧಾ, ಸದ್ಯ ‘ಸೀ 2’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.
ಆಲಿಯಾ 3.8 ಕೋಟಿ ರೂ. ಎಸ್ಯುವಿ
‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರದ ನಟನೆಗೆ ಈ ವರ್ಷ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಪಡೆದ ಬಾಲಿವುಡ್ ನಟಿ ಆಲಿಯಾ ಭಟ್, ಅದೇ ಖುಷಿಯಲ್ಲಿ ಐಶಾರಾಮಿ ಎಸ್ಯುವಿ ಖರೀದಿಸಿದ್ದಾರೆ. ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ (ಎಲ್ಡಬ್ಲೂೃಬಿ) ಕಾರಿನ ಬೆಲೆ ಮುಂಬೈನಲ್ಲಿ 3.8 ಕೋಟಿ ರೂ. ಎನ್ನಲಾಗಿದೆ. ಇದಲ್ಲದೇ ಆಲಿಯಾ ಬಳಿ ರೇಂಜ್ ರೋವರ್ ವೋಗ್, ಆಡಿ ಕ್ಯೂ7, ಆಡಿ ಕ್ಯೂ5, ಆಡಿ ಕ್ಯೂ6, ಬಿಎಂಡಬ್ಲ್ಯೂ 7 ಸಿರೀಸ್ ಕಾರುಗಳೂ ಇವೆ. ಆಲಿಯಾ ಸದ್ಯ ‘ಜಿಗ್ರಾ’ ಚಿತ್ರದ ಶೂಟಿಂಗ್ನಲ್ಲಿ ತೊಡಗಿದ್ದಾರೆ.
ಪೂಜಾ 4 ಕೋಟಿ ರೂ. ಕಾರು
ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ಬಿಜಿಯಿರುವ ಪೂಜಾ ಹೆಗ್ಡೆ, ಇತ್ತೀಚೆಗಷ್ಟೆ ‘ದೇವ’ ಚಿತ್ರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಅದರ ಬೆನ್ನಲ್ಲೇ ಲ್ಯಾಂಡ್ ರೋವರ್ ರೇಂಜರ್ ರೋವರ್ ಎಸ್ಯುವಿ ಖರೀದಿಸಿದ್ದಾರೆ. ಇದರ ಬೆಲೆ ಸುಮಾರು 4 ಕೋಟಿ ರೂ. ಎನ್ನಲಾಗಿದೆ. ಇದಲ್ಲದೇ ಅವರ ಬಳಿ ಆಡಿ ಕ್ಯೂ7, ಜಾಗುವಾರ್, ಪೋರ್ಷೆ, ಬಿಎಂಡಬ್ಲ್ಯೂ 5 ಸಿರೀಸ್ ಕಾರುಗಳಿವೆ.