ಆಗಲೂ ಸಿಗಲಿಲ್ಲ; ಈಗಲೂ ಸಿಗಲಿಲ್ಲ ... ‘ರಾಮಾಯಣ’ ಕಲಾವಿದರಿಗೆ ರಾಯಲ್ಟಿ ಕೊಡಬೇಕಾ?

Ramayan
Published on

ಲಾಕ್‌ಡೌನ್ ಸಂದರ್ಭದಲ್ಲಿ ಪ್ರಸಾರವಾಗಿ ಸಿಕ್ಕಾಪಟ್ಟೆ ಜನಪ್ರಿಯವಾಗಿರುವ ‘ರಾಮಾಯಣ’ ಧಾರಾವಾಹಿಯಲ್ಲಿ ನಟಿಸಿದ ಕಲಾವಿದರಿಗೆ ರಾಯಲ್ಟಿ ಸಿಗಬೇಕಾ?

ಇಂಥದ್ದೊಂದು ಚರ್ಚೆ ಇದೀಗ ಶುರುವಾಗಿರುವುದಷ್ಟೇ ಅಲ್ಲ, ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ. ‘ರಾಮಾಯಣ’ ಧಾರಾವಾಹಿಯ ಚಿತ್ರೀಕರಣವಾಗಿದ್ದು 80ರ ದಶಕದಲ್ಲಿ. ಆಗಲೇ ಈ ಧಾರಾವಾಹಿ ಸಾಕಷ್ಟು ಯಶಸ್ಸು ಮತ್ತು ಜನಪ್ರಿಯತೆಯನ್ನು ಕಂಡಿತ್ತು. ಈಗ ಕರೊನಾ ಕಾರಣದಿಂದ ಲಾಕ್‌ಡೌನ್ ಇರುವುದರಿಂದ, ಈ ಧಾರಾವಾಹಿಯನ್ನು ಇತ್ತೀಚೆಗೆ ಮರುಪ್ರಸಾರ ಮಾಡಲಾಗಿದೆ. ಮರುಪ್ರಸಾರ ಮುಗಿಯುತ್ತಿದ್ದಂತೆಯೇ, ಇಂಥದ್ದೊಂದು ವಿಚಿತ್ರ ಚರ್ಚೆ ಶುರುವಾಗಿದೆ. ಚರ್ಚೆ ಶುರುವಾಗಿರುವುದಷ್ಟೇ ಅಲ್ಲ, ಧಾರಾವಾಹಿಯಲ್ಲಿ ನಟಿಸಿರುವ ಕಲಾವಿದರು ತಮಗೆ ರಾಯಲ್ಟಿ ಕೊಡಬೇಕು ಎಂದು ಹೇಳುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಸೀತಾ ಪಾತ್ರಧಾರಿ ದೀಪಿಕಾ ಚಿಖಾಲಿಯಾ, ‘ನಮಗೆ ರಾಯಲ್ಟಿ ಸಿಗಬೇಕು. ಆಗ ಚಿತ್ರೀಕರಣ ಮಾಡುವಾಗಲೂ, ನಮಗೆ ಹೆಚ್ಚೇನೂ ಹಣ ಕೊಟ್ಟಿರಲಿಲ್ಲ. ಈಗಲೂ ಏನೂ ಸಿಕ್ಕಿಲ್ಲ ಎಂದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ. ರಾಮನ ಪಾತ್ರ ಮಾಡಿರುವ ಅರುಣ್ ಗೋವಿಲ್ ಸಹ ಆ ಕಾಲಕ್ಕೆ ಕಡಿಮೆ ಬಜೆಟ್ ಇದ್ದುರಿಂದ ತಮಗೆಲ್ಲಾ ಸಿಕ್ಕಿದ್ದು ಕಡಿಮೆಯೇ ಎಂದು ಹೇಳಿಕೊಂಡಿದ್ದಾರೆ. ಈಗ ಧಾರಾವಾಹಿಯನ್ನು ಮರುಪ್ರಸಾರ ಮಾಡಿ, ಅದು ಸಾಕಷ್ಟು ಜನಪ್ರಿಯತೆ ಪಡೆದಿರುವುದರಿಂದ, ರಾಯಲ್ಟಿ ಕೇಳುವುದರಲ್ಲಿ ತಪ್ಪೇನಿದೆ ಎಂದಿದ್ದಾರೆ.

ಇದು ಕಲಾವಿದರ ಕಥೆಯಾದರೆ, ಧಾರಾವಾಹಿ ನಿರ್ಮಿಸಿದ್ದ ರಾಮಾನಂದ್ ಸಾಗರ್ ಅವರ ಮಗ ಮೋತಿ ಸಾಗರ್ ಹೇಳುವ ಮಾತು ಬೇರೆಯೇ ಇದೆ. ‘ಆ ಸಂದರ್ಭದಲ್ಲಿ ಯಾರ್ಯಾರಿಗೆ ಏನೇನು ಸಂಭಾವನೆ ಕೊಡಬೇಕಿತ್ತೋ, ಅವೆಲ್ಲಾ ಕೊಟ್ಟಾಗಿದೆ. ಮರುಪ್ರಸಾರ ಮಾಡಿರುವುದು ದೂರದರ್ಶನದವರು. ಕಲಾವಿದರಿಗೆ ರಾಯಲ್ಟಿ ಸಿಗಬೇಕೋ, ಬೇಡವೋ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕಾದವರು. ಕಲಾವಿದರು ತಮಗೆ ರಾಯಲ್ಟಿ ಸಿಗಬೇಕು ಎಂದಿದ್ದರೆ, ಅದಕ್ಕೆ ಕಾರಣ ಇರಬಹುದು. ಈ ವಿಷಯದಲ್ಲಿ ನಾನೇನೂ ಹೇಳುವುದಕ್ಕೆ ಉಳಿದಿಲ್ಲ’ ಎಂದು ಮೋತಿ ಸಾಗರ್ ಹೇಳಿದ್ದಾರೆ.

ಅಲ್ಲಿಗೆ, ಇಷ್ಟು ವರ್ಷಗಳ ನಂತರ ‘ರಾಮಾಯಣ’ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಇದು ಯಾವ ಮಟ್ಟಕ್ಕೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net