ಒಟಿಟಿಗಳಿಗೆ ಸೆಡ್ಡು ಹೊಡೆದ ಕನ್ನಡ ಸಿನಿಮಾ ; ಯೂಟ್ಯೂಬ್​ನಲ್ಲೇ ವೈರಲ್​ ಆಯಿತು ಶೋಷಿತೆ

sacsacsac
Published on

ನೆಟ್​ಫ್ಲಿಕ್ಸ್​, ಅಮೆಜಾನ್​ ಪ್ರೈಮ್​ನಂತಹ ಪ್ರಮುಖ ಒಟಿಟಿ ವೇದಿಕೆಗಳು ಕನ್ನಡ ಚಿತ್ರಗಳನ್ನು ಕಡೆಗಣಿಸುತ್ತಿವೆ ಎಂಬ ಆರೋಪ ಮೊದಲಿನಿಂದಲೂ ಇದೆ. ಇದೀಗ ಈ ಒಟಿಟಿಗಳಿಗೆ ಸೆಡ್ಡು ಹೊಡೆದಿರುವ ಕನ್ನಡ ಸಿನಿಮಾ ಶೋಷಿತೆ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಟೆಕ್ಕಿ ಶಶಿಧರ್​ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಕಲನ ಮಾಡಿ ಆ್ಯಕ್ಷನ್​-ಕಟ್​ ಮಾಡಿರುವ ಈ ಚಿತ್ರ 2023ರ ಡಿಸೆಂಬರ್​ನಲ್ಲಿ ಥಿಯೇಟರ್​ಗಳಲ್ಲಿ ರಿಲೀಸ್​ ಆಗಿತ್ತು. ನಿರೂಪಕಿ, ನಟಿ ಡಾ. ಜಾನ್ವಿ ರಾಯಲ, ರೂಪಾ ರಾಯಪ್ಪ, ಪ್ರಶಾಂತ್​, ದರ್ಶನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರವಿದು.

ನಿರ್ದೇಶಕರು ಎಂಟು ತಿಂಗಳಿಗೂ ಹೆಚ್ಚು ಕಾಲ ಅಮೆಜಾನ್, ನೆಟ್‌ಫ್ಲಿಕ್ಸ್ ನಂತಹ ಪ್ರಮುಖ ಒಟಿಟಿ ವೇದಿಕೆಗಳನ್ನು ಸಂಪರ್ಕಿಸಿದರೂ, ಸ್ಪಂದಿಸಿರಲಿಲ್ಲ. ಹಾಗಂತ ಧೃತಿಗೆಡದ ಚಿತ್ರತಂಡ ಕನ್ನಡದ ಶೋಷಿತೆ ಚಿತ್ರವನ್ನು ತೆಲುಗಿಗೆ ಡಬ್​ ಮಾಡಿ ಶ್ರೀಮತಿ ಎಂಬ ಟೈಟಲ್​ನಲ್ಲಿ ನೇರವಾಗಿ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಿದ್ದು, ಕೇವಲ ಒಂದು ತಿಂಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಶೇಷ ಅಂದರೆ, ಯೂಟ್ಯೂಬ್​ ಲಿಂಕ್​ನಲ್ಲಿ ಕೆಲವರು ಟಿಕೆಟ್​ ದರ ಅಂತ ಹಣವನ್ನೂ ಪಾವತಿಸಿ, ಚಿತ್ರತಂಡದ ಪ್ರಯತ್ನವನ್ನು ಬೆಂಬಲಿಸಿದ್ದಾರೆ.

ಈ ಯಶಸ್ಸಿನ ಬೆನ್ನಲ್ಲೇ ಕಳೆದ ಕೆಲ ದಿನಗಳ ಹಿಂದಷ್ಟೇ ಕನ್ನಡದ ಶೋಷಿತೆಯನ್ನೂ ಯೂಟ್ಯೂಬ್​ನಲ್ಲಿ ರಿಲೀಸ್​ ಮಾಡಲಾಗಿದ್ದು, 25 ಲಕ್ಷಕ್ಕೂ ಹೆಚ್ಚು ಸಿನಿಮಾ ವೀಕ್ಷಿಸಿದ್ದಾರೆ. ಆ ಮೂಲಕ ಸ್ಟಾರ್​ಗಳಿಲ್ಲದಿದ್ದರೂ, ಒಟಿಟಿಗಳು ಸಪೋರ್ಟ್​ ಮಾಡದಿದ್ದರೂ ಜನ ಉತ್ತಮ ಕಂಟೆಂಟ್​ ಚಿತ್ರಗಳನ್ನು ಮೆಚ್ಚಿಕೊಳ್ಳುತ್ತಾರೆ ಎಂದು ಚಿತ್ರತಂಡ ಸಂಭ್ರಮಿಸಿದೆ. ಇದೇ ಖುಷಿಯಲ್ಲಿ ಮುಂದಿನ ದಿನಗಳಲ್ಲಿ ಚಿತ್ರವನ್ನು ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net