

ಬೆಂಗಳೂರು: ಅರ್ಧ ಭಾಗ ಚಿತ್ರೀಕರಣವಾಗಿರುವ ಚಿತ್ರಗಳನ್ನು ಪೂರ್ಣ ಮಾಡುವುದಕ್ಕೆ ಕಳೆದ ತಿಂಗಳು ಸರ್ಕಾರ ಅನುಮತಿ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸರ್ಕಾರ ಅನುಮತಿ ಕೊಟ್ಟರೂ, ಕರೊನಾ ಹರಡುವ ಭಯದಿಂದ ಬಹಳಷ್ಟು ಚಿತ್ರತಂಡಗಳು ಚಿತ್ರೀಕರಣ ಮಾಡುವುದಕ್ಕೆ ಇನ್ನೂ ಮುಂದಾಗಿಲ್ಲ. ಈ ಮಧ್ಯೆ, ‘ದಾರಿ ಯಾವುದಯ್ಯಾ ವೈಕುಂಠಕೆ’ ಎಂಬ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿಸಲಾಗಿದೆ.
ಲಾಕ್ಡೌನ್ ಘೋಷಣೆ ಅಗುವುದಕ್ಕಿಂತ ಮುಂಚೆ, ‘ದಾರಿ ಯಾವುದಯ್ಯಾ ವೈಕುಂಠಕೆ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸಿ, ಕುಂಬಳಕಾಯಿ ಒಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಚಿತ್ರತಂಡ, ಲಾಕ್ಡೌನ್ನಿಂದ ಚಿತ್ರೀಕರಣ ನಿಲ್ಲಿಸಬೇಕಾಯಿತು. ಇದೀಗ ಸರ್ಕಾರ ಅನುಮತಿ ಕೊಟ್ಟಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮುಗಿಸಲಾಗಿದೆ.
ಈ ಹಿಂದೆ ‘ಕೃಷ್ಣ ಗಾರ್ವೆಂಟ್ಸ್’ ಎಂಬ ಚಿತ್ರ ನಿರ್ದೇಶಿಸಿದ್ದ ಸಿದ್ದು ಪೂರ್ಣಚಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವರ್ಧನ್ ತೀರ್ಥಹಳ್ಳಿ ನಾಯಕರಾಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ‘ತಿಥಿ’ ಖ್ಯಾತಿಯ ಪೂಜಾ ನಟಿಸಿದ್ದಾರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ‘ಡಿಂಗ’ ಖ್ಯಾತಿಯ ಅನೂಷಾ ಇದ್ದಾರೆ. ಭಗತ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಮಾಡಿದ್ದಾರೆ.