ಫ್ಯಾಮಿಲಿಯಿಂದ ಫ್ಯಾಮಿಲಿಗಾಗಿ

thara mar 20
Published on

‘ನಿಜಾರ್ಥದಲ್ಲೂ ಇದೊಂದು ಫ್ಯಾಮಿಲಿ ಪ್ಯಾಕೇಜ್ ಸಿನಿಮಾ ...’

ಹೀಗೆಂದು ‘ಶಿವಾರ್ಜುನ’ ಸಿನಿಮಾಗೆ ಸರ್ಟಿಫಿಕೇಟ್ ಕೊಟ್ಟಿದ್ದು ಹಿರಿಯ ನಟಿ ತಾರಾ. ಮಾರ್ಚ್ 13ರಂದು ಸಿನಿಮಾ ಬಿಡುಗಡೆ ಆಗಲಿರುವ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೆಟ್​ನಲ್ಲಿ ಫ್ಯಾಮಿಲಿ ತರಹ ಇದ್ವಿ ಎಂದು ಹಲವರು ಶೂಟಿಂಗ್ ಬಗ್ಗೆ ಹೇಳುವುದು ಸಾಮಾನ್ಯ. ಆದರೆ, ಈ ಚಿತ್ರದಲ್ಲಿ ನಾವೆಲ್ಲ ನಿಜವಾಗಿಯೂ ಫ್ಯಾಮಿಲಿ ಆಗಿದ್ವಿ’ ಎಂದು ಆ ಕುರಿತು ವಿವರಣೆ ನೀಡಿದರು ತಾರಾ.

‘ನಿರ್ವಪಕ ಶಿವಾರ್ಜುನ ಅವರು ಅವರ ಹೆಸರಿನಲ್ಲೇ ಸಿನಿಮಾ ಮಾಡಿದ್ದರೆ, ಪತ್ನಿಯ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಪುತ್ರನ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಚಿರಂಜೀವಿ ಸರ್ಜಾ ಹೀರೋ ಆಗಿ ನಟಿಸಿದ್ದರೆ ಅವರ ಪತ್ನಿ ಮೇಘನಾ ರಾಜ್ ಗಾಯಕಿಯಾಗಿ ಗೀತೆಯೊಂದನ್ನು ಹಾಡಿದ್ದಾರೆ. ಸಾಧು ಕೋಕಿಲ ಅಭಿನಯಿಸಿದ್ದರೆ ಅವರ ಪುತ್ರ ಸುರಾಗ್ ಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟಿಸಿದ್ದರೆ, ನನ್ನ ಪತಿ ವೇಣು ಛಾಯಾಗ್ರಹಣ ಮಾಡಿದ್ದಾರೆ. ನಮ್ಮ ಮಗ ಶ್ರೀಕೃಷ್ಣ ಸಹ ಒಂದು ಪಾತ್ರದಲ್ಲಿ ನಟಿಸಿದ್ದಾನೆ. ಹೀಗಾಗಿ ಈ ಸಿನಿಮಾ ಒಂದು ಫ್ಯಾಮಿಲಿ ಪ್ಯಾಕೇಜ್, ನಿಜಾರ್ಥದಲ್ಲೂ ನಾವೆಲ್ಲ ಫ್ಯಾಮಿಲಿ ಆಗಿದ್ದೆವು’ ಎಂದರು ತಾರಾ.

‘ಶಿವಾರ್ಜುನ್ ಚಿತ್ರರಂಗದಲ್ಲಿ ಬಹಳ ಕಷ್ಟಪಟ್ಟು ಜನ, ಸ್ನೇಹ, ನಂಬಿಕೆ ಸಂಪಾದಿಸಿದ್ದಾರೆ. 35 ವರ್ಷಗಳಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಬದುಕಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಶಿವತೇಜಸ್ ಎಲ್ಲರಿಗೂ ಕಂಫರ್ಟ್ ಜೋನ್ ಕೊಟ್ಟ ನಿರ್ದೇಶಕ. ಚಿರು ನಮ್ಮ ಮನೆಯ ಹುಡುಗ. ಚಿರು ಜತೆ ಇದು ನನ್ನ ಎರಡನೇ ಸಿನಿಮಾ’ ಎಂದು ತಾರಾ ಇಡೀ ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಈ ಸಿನಿಮಾದಲ್ಲಿ ನಾನು ಸಂಗೀತ ಸಂಯೋಜಿಸಿದ್ದು ಒಂದು ಹಾಡಿಗೆ ಮಾತ್ರ. ಉಳಿದೆರಡಕ್ಕೆ ತಂದೆ ನಿರ್ದೇಶನ ಮಾಡಿದ್ದಾರೆ. ಆದರೆ, ಶಿವಾರ್ಜುನ ಅವರು ನಮ್ಮ ಹುಡುಗ ಬೆಳೆಯಲಿ ಎಂದು ಹೆಸರು ಹಾಕಿ ಕ್ರೆಡಿಟ್ ಕೊಟ್ಟಿದ್ದಾರೆ’ ಎಂದರು ಸುರಾಗ್ ಕೋಕಿಲ.

‘ಶ್ರೀಕೃಷ್ಣ ಬಾಲಕನೊಬ್ಬನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಫಸ್ಟ್ ಡೇ ಫಸ್ಟ್ ಶಾಟ್ ಅವನದ್ದೇ, ಫಸ್ಟ್ ಶಾಟ್​ನಲ್ಲೇ ಓಕೆ ಆಯಿತು. ಆತನಿಗೆ ಕಲೆ ಬ್ಲಡ್​ನಲ್ಲೇ ಬಂದಿದೆ’ ಎಂದು ತಾರಾ ಪುತ್ರ ಶ್ರೀಕೃಷ್ಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಿರ್ದೇಶಕ ಶಿವತೇಜಸ್.

ಸಿನಿಮಾದಲ್ಲಿ ಅಮೃತಾ ಅಯ್ಯಂಗಾರ್, ಅಕ್ಷತಾ, ಅಕ್ಷಿತಾ ನಾಯಕಿಯರಾಗಿದ್ದು, ಕುರಿ ಪ್ರತಾಪ್, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net