

ಬೆಂಗಳೂರು: ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಬಂದಿರುವ ನಟ ಶಿವರಾಜಕುಮಾರ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜತೆಗೆ ನಿಧಾನವಾಗಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ರಾಮಚರಣ್ ಅಭಿನಯದ ‘ಪೆದ್ದಿ’ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಹಾಗೆಯೇ ಒಂದೊಂದೇ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಶಿವಣ್ಣ ಅಭಿನಯಸಲಿರುವ ಮುಂದಿನ ಸಿನಿಮಾ ‘ಎ ಫಾರ್ ಆನಂದ್’ ಚಿತ್ರ ಶುಕ್ರವಾರ ಸೆಟ್ಟೇರಿತು. ಚಿಕಿತ್ಸೆ ಪಡೆದು ಶಿವಣ್ಣ ವಾಪಸ್ಸಾದ ಬಳಿಕ ಮುಹೂರ್ತ ಆಚರಿಸಿಕೊಂಡ ಮೊದಲ ಚಿತ್ರವಿದು. ‘ಘೋಸ್ಟ್’ ಬಳಿಕ ಶಿವರಾಜಕುಮಾರ್, ಶ್ರೀನಿ ಮತ್ತೊಮ್ಮೆ ಈ ಚಿತ್ರದಲ್ಲಿ ಒಂದಾಗಿದ್ದು, ‘ವೇದ’ ಮತ್ತು ‘ಭೈರತಿ ರಣಗಲ್’ ನಂತರ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಗೀತಕ್ಕ ನಿರ್ಮಿಸುತ್ತಿದ್ದಾರೆ. ಶ್ರೀನಿ, ‘‘ಘೋಸ್ಟ್’ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿತ್ತು. ‘ಎ ಫಾರ್ ಆನಂದ್’ ಸಂಪೂರ್ಣ ವಿಭಿನ್ನ ಕಥೆ. ಫ್ಯಾಮಿಲಿ ಎಂಟರ್‌ಟೈನರ್ ಜತೆಗೆ ಮಕ್ಕಳಿಗೂ ಕನೆಕ್ಟ್ ಆಗುವ ಸಿನಿಮಾ. ಇದು ಸವಾಲಿನ ಕೆಲಸವೇ. ಅಕ್ಟೋಬರ್‌ನಲ್ಲಿ ಶಿವಮೊಗ್ಗದ ಸಾಗರದ ಕಡೆ ಚಿತ್ರೀಕರಿಸಲು ಯೋಜನೆ ಹಾಕಿಕೊಂಡಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಮಹೇನ್ ಸಿಂಹ ಛಾಯಾಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ವಿ.ಎಂ.ಪ್ರಸನ್ನ ಸಂಭಾಷಣೆ, ವಾಸುಕಿ ವೈಭವ್ ಸಂಗೀತ ಚಿತ್ರಕ್ಕಿರಲಿದೆ.
ಅಕ್ಟೋಬರ್‌ಗೆ ಶೂಟಿಂಗ್ ಆರಂಭ: ಶಿಕ್ಷಕ ಪಾತ್ರ ನಿರ್ವಹಿಸುತ್ತಿರುವ ಶಿವಣ್ಣ, ‘ಶ್ರೀನಿ ಜತೆ ನನಗೆ ಇದು ಎರಡನೇ ಸಿನಿಮಾ. ಆದರೆ, ನನಗೆ ಅವರು ಹದಿನೈದು ವರ್ಷದ ಸ್ನೇಹಿತ. ‘ಶಿವ’ ಚಿತ್ರದ ಫೋಟೋಶೂಟ್ ಮಾಡುವಾಗ ಒಂದು ಕಥೆ ಹೇಳಿದ್ದರು. ಹಲವು ಬಾರಿ ಭೇಟಿಯಾದಾಗಲೂ ಈ ಕಥೆ ಹೇಳುತ್ತಿದ್ದರು. ಆದರೆ, ಏನೋ ಮಿಸ್ ಆಗುತ್ತಿದೆ ಅನಿಸುತ್ತಿತ್ತು. ಈ ಚಿತ್ರಕ್ಕೆ ಅಟ್ಯಾಚ್‌ಮೆಂಟ್ ಮುಖ್ಯ. ಮಕ್ಕಳನ್ನು ಯಾವ ರೀತಿ ಓದಿಸಬೇಕು? ಅವರನ್ನು ಯಾವ ರೀತಿ ದಾರಿಗೆ ತರಬೇಕು? ಎನ್ನುವುದೇ ಚಿತ್ರದ ತಿರುಳು. ಶ್ರೀನಿ ತುಂಬಾ ಚೆನ್ನಾಗಿ ಸ್ಕ್ರೀನ್‌ಪ್ಲೇ ಮಾಡಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆರು ಹಾಡುಗಳಿವೆ. ನನ್ನ ಮೊದಲ ಸಿನಿಮಾ ‘ಆನಂದ್’ ಬಳಿಕ 39 ವರ್ಷಗಳ ನಂತರ ಮತ್ತೊಮ್ಮೆ ‘ಆನಂದ್’ ಆಗಿದ್ದೇನೆ’ ಎಂದು ಖುಷಿ ಹಂಚಿಕೊಂಡರು.
ಪಪ್ಪಿ ಹುಡುಗರಿಗೆ ಗೀತಕ್ಕ ಪಪ್ಪಿ: ವಿಶೇಷ ಅಂದರೆ ಶಿವಣ್ಣ ‘ಪಪ್ಪಿ’ ಚಿತ್ರದ ಬಾಲನಟರಾದ ಆದಿತ್ಯ, ಜಗದೀಶ್ ಮತ್ತು ನಿರ್ದೇಶಕ ಆಯುಷ್ ಮಲ್ಲಿಯನ್ನೂ ‘ಎ ಫಾರ್ ಆನಂದ್’ ಮುಹೂರ್ತಕ್ಕೆ ಕರೆಸಿಕೊಂಡಿದ್ದರು. ‘ಟ್ರೇಲರ್ ತುಂಬ ಇಷ್ಟವಾಗಿತ್ತು. ಖಂಡಿತ ‘ಪಪ್ಪಿ’ ಸಿನಿಮಾ ನೋಡುತ್ತೇನೆ. ಕನ್ನಡ ಚಿತ್ರಗಳನ್ನು ಎಲ್ಲರೂ ನೋಡಿ’ ಎಂದು ತಂಡಕ್ಕೆ ಶುಭಹಾರೈಸಿದರು. ಹಾಗೇ ಆದಿತ್ಯ ಮತ್ತು ಜಗದೀಶ್ ಇಬ್ಬರಿಗೂ ಕೆನ್ನೆಗೆ ಮುತ್ತನ್ನಿಟ್ಟು ಗೀತಕ್ಕೆ ಆಶೀರ್ವದಿಸಿದರು.