ಸಾಲು ಸಿನಿಮಾಗಳ ಬಿಜಿ ನಡುವೆ ಮತ್ತೊಂದು ಹೊಸ ಚಿತ್ರ ಘೋಷಿಸಿದ ಶಿವಣ್ಣ

dad
Published on

ಬೆಂಗಳೂರು: ನಟ ಶಿವರಾಜಕುಮಾರ್ ಕನ್ನಡ ಸೇರಿ ತೆಲುಗು, ತಮಿಳಿನ ಹಲವಾರು ಸಿನಿಮಾಗಳಲ್ಲಿ ಸದ್ಯ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬಕ್ಕೆ ಒಂಬತ್ತು ಸಿನಿಮಾಗಳ ಅಪ್‌ಡೇಟ್ ದೊರೆತಿತ್ತು. ಅದರ ಮಧ್ಯೆಯೇ, ಅವರ ಮತ್ತೊಂದು ಹೊಸ ಸಿನಿಮಾ ಮುಹೂರ್ತ ನೆರವೇರಿದೆ. ಹೆಸರು ‘ಡ್ಯಾಡ್’. ಇದು ತಂದೆ ಸೆಂಟಿಮೆಂಟ್ ಕಥೆಯಾಗಿದ್ದು, ಶಿವರಾಜಕುಮಾರ್ ವೈದ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ನಂದಿ ದೇವಸ್ಥಾನದಲ್ಲಿ ಇತ್ತೀಚೆಗೆ ಚಿತ್ರಕ್ಕೆ ಚಾಲನೆ ದೊರೆತಿದ್ದು, ಗೀತಾ ಶಿವರಾಜಕುಮಾರ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. 33 ವರ್ಷಗಳ ಹಿಂದೆ ಶಿವಣ್ಣ ನಟನೆಯ ‘ಜಗ ಮೆಚ್ಚಿದ ಹುಡುಗ’ ಚಿತ್ರದ ಮುಹೂರ್ತ ಕೂಡ ಇಲ್ಲೇ ನೆರವೇರಿತ್ತು. ಇನ್ನು ತೆಲುಗಿನ ‘ಅಸಾಧ್ಯುಡು’, ‘ಮಿಸ್ಟರ್ ನೂಕಯ್ಯ’, ‘ಹಿಡಿಂಬ’ ಖ್ಯಾತಿಯ ಅನಿಲ್ ಕೆನ್ನಗಂಟಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅನಿಲ್‌ಗೆ ಇದು ಮೊದಲ ಕನ್ನಡ ಸಿನಿಮಾ. ‘ಡ್ಯಾಡ್’ ಚಿತ್ರದಲ್ಲಿ ಶಿವರಾಜಕುಮಾರ್‌ಗೆ ‘ನವಗ್ರಹ’ ನಟಿ ಶರ್ಮಿಳಾ ಮಾಂಡ್ರೆ ಜೋಡಿಯಾಗಿದ್ದಾರೆ. ಬೇಬಿ ನಕ್ಷತ್ರ, ಬಾಬು, ಮಲಯಾಳಂ ನಟ ಸೂರಜ್ ವೆಂಜರಮೂಡು ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ‘ಆರ್ಯ 2’ ಖ್ಯಾತಿಯ ಬಿ. ರಾಜಶೇಖರ್ ಛಾಯಾಗ್ರಹಣ ಚಿತ್ರಕ್ಕಿರಲಿದೆ. ಬೆಂಗಳೂರು, ಮೈಸೂರಿನಲ್ಲಿ 50 ದಿನಗಳ ಕಾಲ ಶೂಟಿಂಗ್‌ಗೆ ಚಿತ್ರತಂಡ ಯೋಜಿಸಿದೆ. ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ಮೂಡಿಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net