

ಬೆಂಗಳೂರು: ‘ದ ಮಾಸ್ಟರ್’ ಎಂಬ ಟ್ಯಾಗ್ಲೈನ್ ಹೊಂದಿರುವ ‘ದ್ರೋಣ’ ಸಿನಿಮಾದಲ್ಲಿ ನಾಯಕ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರಿಂದ ಭರ್ಜರಿ ಮಾಸ್ಟರ್ ಸ್ಟ್ರೋಕ್ಸ್ ಇರುವುದು ದೃಢವಾಗಿದೆ. ಮಾತ್ರವಲ್ಲ ಶಿವಣ್ಣನ ಈ ಚಿತ್ರಕ್ಕೆ ತಮ್ಮನೂ ‘ಪವರ್’ ತುಂಬಿದ್ದಾರೆ. ಅರ್ಥಾತ್, ಭಾನುವಾರ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ‘ದ್ರೋಣ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಶಿವಣ್ಣನ ಭರ್ಜರಿ ಹೊಡೆದಾಟದ ದೃಶ್ಯಗಳಿವೆ. ರಾಮನಾಮದಿಂದ ಆರಂಭವಾಗುವ ಟ್ರೇಲರ್ನಲ್ಲಿ ಶಿವರಾಜ್ಕುಮಾರ್ ಸುತ್ತಿಗೆ-ವಿಕೆಟ್ ಬೀಸಿ ವಿಲನ್ಗಳನ್ನು ಎದುರಿಸುವ ದೃಶ್ಯಗಳಿದ್ದು, ಚಿತ್ರ ಸಾಹಸಮಯವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದೆ. ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್ಕುಮಾರ್, ‘ಅಣ್ಣನ ಚಿತ್ರವನ್ನು ಹೊಗಳಿದರೆ ಮನೆಯವರನ್ನು ಹೊಗಳಿದಂತೆ ಆಗುತ್ತದೆ’ ಎನ್ನುತ್ತ ಚಿತ್ರದ ಕುರಿತು ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು.
‘ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಕಾಲೇಜು ದಿನಗಳು ನೆನಪಿಗೆ ಬಂದು ವಿದ್ಯಾರ್ಥಿಯಂತೆ ನಟಿಸಿದೆ. ಮೊದಲ ಚಿತ್ರ ‘ಆನಂದ್’ನಲ್ಲಿ ‘ನನ್ನ ಹೆಸರು ಆನಂದ್’ ಎನ್ನುವ ಡೈಲಾಗ್ನಂತೆ ಇಲ್ಲಿಯವರೆಗೂ ಅದೇರೀತಿ ಇದ್ದೇನೆ. ಎಲ್ಲರಿಗೂ ಶಿಕ್ಷಣ ಕೊಡಬೇಕು ಎಂಬುದೇ ಈ ಚಿತ್ರದ ಸಂದೇಶ’ ಎಂದರು ಶಿವರಾಜ್ ಕುಮಾರ್. ‘ಅಣ್ಣ-ತಂಗಿ ಥರದ ಮತ್ತೊಂದು ಚಿತ್ರ ಕೊಡಿ’ ಎಂಬ ಅಭಿಮಾನಿಯೊಬ್ಬರ ಕೋರಿಕೆಗೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್, ‘ಮತ್ತೊಂದು ರಾಧಿಕಾ ಸಿಕ್ಕರೆ ಖಂಡಿತ ಮಾಡುತ್ತೇನೆ’ ಎಂದರು. ‘ಕೌಟುಂಬಿಕ ಕಥಾಹಂದರವಾಗಿದ್ದರೂ ಸೆಂಟಿಮೆಂಟ್-ಹಾಸ್ಯ ಸೇರಿಸಲಾಗಿದೆ. ಶಿವಣ್ಣ ಶಿಕ್ಷಕ ಸಹಿತ 2 ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರ್ಕಾರಿ ಶಾಲೆಗಳು ಯಾವ ಕಾರಣಕ್ಕೆ ಮುಚ್ಚುತ್ತಿವೆ, ಮಧ್ಯಮ ವರ್ಗದವರು ಮಕ್ಕಳನ್ನು ಶಾಲೆಗೆ ಸೇರಿಸುವಾಗ ಎದುರಿಸುವ ಸಮಸ್ಯೆಗಳು ಮುಂತಾದವುಗಳ ಚಿತ್ರಣ ಈ ಸಿನಿಮಾದಲ್ಲಿದೆ’ ಎಂದರು ನಿರ್ದೇಶಕ ಪ್ರಮೋದ್ ಚಕ್ರವರ್ತಿ.
ಚಿತ್ರಕ್ಕೆ ನಿರ್ದೇಶಕರೇ ಕಥೆ-ಚಿತ್ರಕಥೆ-ಸಂಭಾಷಣೆಯನ್ನೂ ಬರೆದಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಇನಿಯಾ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ. ಸ್ವಾತಿ ಶರ್ವ, ರಂಗಾಯಣ ರಘು, ರವಿಕಿಶನ್, ಸಾಧುಕೋಕಿಲ ಮುಂತಾದವರು ತಾರಾಗಣದಲ್ಲಿದ್ದಾರೆ. ರಾಮ್್ರ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣ, ಬಸವರಾಜ ಅರಸು ಸಂಕಲನ, ಡಾ.ನಾಗೇಂದ್ರಪ್ರಸಾದ್, ಅರಸು ಅಂತಾರೆ ಸಾಹಿತ್ಯ ಈ ಚಿತ್ರಕ್ಕಿದೆ. ‘ಡಾಲ್ಪಿನ್ ಮೀಡಿಯಾ ಹೌಸ್’ ಬ್ಯಾನರ್ನಲ್ಲಿ ಬಿ.ಮಹದೇವ್, ಬಿ.ಸಂಗಮೇಶ್ ಮತ್ತು ಶೇಷು ಚಕ್ರವರ್ತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶಿವರಾಜ್ಕುಮಾರ್ ವೃತ್ತಿಜೀವನದದಲ್ಲಿ 34 ವರ್ಷಗಳನ್ನು ಪೂರೈಸಿದ್ದ್ದಂದ ತಂಡದ ವತಿಯಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ‘ದ್ರೋಣ’ ಸಿನಿಮಾ ಮಾ.6ರಂದು ತೆರೆ ಕಾಣಲಿದೆ.