ಶಿವಣ್ಣ @35: ಅಭಿಮಾನಿಗಳಿಂದ ಸಂಭ್ರಮಾಚರಣೆ

SRK
Published on

ಬೆಂಗಳೂರು: ‘ಸೋಲು ಮತ್ತು ಗೆಲುವನ್ನು ಒಂದೇ ರೀತಿ ಸ್ವೀಕರಿಸಬೇಕು. ಗೆದ್ದ ಸಿನಿಮಾವನ್ನು ಆಯ್ದುಕೊಂಡಿದ್ದು ನಾವೇ, ಸೋತ ಚಿತ್ರದ ಕಥೆ ಕೇಳಿ ನಟಿಸಿದವರೂ ನಾವೇ ...’ ಚಿತ್ರರಂಗದಲ್ಲಿ 35 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ಯಾಂಡಲ್​ವುಡ್​ನ ‘ಸೆಂಚುರಿ ಸ್ಟಾರ್’ ಶಿವರಾಜಕುಮಾರ್ ಹೇಳಿದ ಮಾತಿದು. ಫೆ.19ಕ್ಕೆ ಶಿವರಾಜಕುಮಾರ್ ಬಣ್ಣ ಹಚ್ಚಿ 35 ವರ್ಷಗಳಾಗಿವೆ. ಈ ಸಂಭ್ರಮವನ್ನು ಆಚರಿಸಲು ಶುಕ್ರವಾರ ಅಖಿಲ ಕರ್ನಾಟಕ ಶಿವರಾಜಕುಮಾರ್ ಸೇನಾ ಸಮಿತಿಯು ಶಿವಣ್ಣ ಅವರ ನಾಗವಾರದ ಮನೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 35 ಕೆಜಿ ತೂಕದ ಕೇಕ್ ಕತ್ತರಿಸಿ ಅಭಿಮಾನಿಗಳ ಜತೆಗೆ ಶಿವಣ್ಣ ಸಂಭ್ರಮಿಸಿದರು.

ಮೂರೂವರೆ ದಶಕದ ಪಯಣವನ್ನು ಕಿರಿದಾಗಿ ನೆನಪಿಸಿಕೊಂಡರು. ‘ಶುಕ್ರವಾರಕ್ಕೆ ‘ಆನಂದ’ ಚಿತ್ರದ ಮುಹೂರ್ತವಾಗಿ 35 ವರ್ಷವಾಯ್ತು. ಆವತ್ತಿನ ಸಂದರ್ಭ ಹೇಗಿತ್ತು ಎಂಬುದು ಈಗಲೂ ನನಗೆ ನೆನಪಿದೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿ ಕಾರ್ಯಕ್ರಮ ನಡೆದಿತ್ತು. ಅಪ್ಪಾಜಿ, ಅಮ್ಮ, ಉದಯಶಂಕರ್ ಸೇರಿ ಹಲವರಿದ್ದರು. ಲಕ್ಷ್ಮಣ್ ರಾವ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದರು. ಆಗ ತುಂಬ ಭಾವುಕನಾಗಿದ್ದೆ. ಯಾಕೆ ಕಣ್ಣೀರು ಬಂತು ಎಂಬುದು ನನಗೇ ತಿಳಿದಿರಲಿಲ್ಲ’ ಎನ್ನುವ ಶಿವಣ್ಣ, ಸೋಲು ಮತ್ತು ಗೆಲುವನ್ನೂ ತಮ್ಮದೇ ಧಾಟಿಯಲ್ಲಿ ವಿವರಿಸುತ್ತಾರೆ. ‘ಸೋಲು ಮತ್ತು ಗೆಲುವು ಎರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಬೇಕು. ಏಕೆಂದರೆ, ಆ ಸೋಲಿಗೆ ಮತ್ತು ಗೆಲುವಿಗೆ ಕಾರಣಕರ್ತರು ನಾವೇ ಆಗಿರುತ್ತೇವೆ. ಹಾಗಾಗಿ ಪಾಸಿಟಿವ್ ಪ್ರತಿಕ್ರಿಯೆ ನಮ್ಮದಾಗಿರಬೇಕು’ ಎಂಬುದು ಅವರ ಮಾತು.

ಅಭಿಮಾನಿಗಳ ಪ್ರೀತಿಗೆ ಬೆಲೆಕಟ್ಟಲಾಗದು: ‘ಪ್ರತಿ ವರ್ಷ ಜನ್ಮದಿನ ಹೇಗೇ ಬರುತ್ತದೋ, ಅದೇ ರೀತಿ ಕರಿಯರ್​ಗೂ ವಯಸ್ಸಾಗುತ್ತದೆ. ಇದೀಗ ಚಿತ್ರರಂಗಕ್ಕೆ ಬಂದು 35 ವರ್ಷ ತುಂಬಿದೆ. ಕೋವಿಡ್ ಹಿನ್ನೆಲೆಯಲ್ಲಿ ಆಚರಣೆ ಬೇಡ ಎಂದರೂ ಅಭಿಮಾನಿಗಳು ಕೇಳುವುದಿಲ್ಲ. ಹಾಗಂತ ಅವರ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ. ಅವರ ಆ ಪ್ರೀತಿಯೇ ನಮಗೆ ಎನರ್ಜಿ. 35 ಆಗಿದೆ, 50ರವರೆಗೂ ಅವರಿಗೆ ಸಿನಿಮಾ ಮೂಲಕ ಮನರಂಜನೆ ನೀಡುತ್ತೇನೆ. ಈ ಸುದೀರ್ಘ ಪಯಣದಲ್ಲಿ ನನ್ನ ಜತೆಗಿದ್ದ ಎಲ್ಲರಿಗೂ ನನ್ನ ಕಡೆಯಿಂದ ಧನ್ಯವಾದಗಳು’ ಎಂದಿದ್ದಾರೆ ಶಿವಣ್ಣ

ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ!: ಕಳೆದ 35 ವರ್ಷಗಳಿಂದ ಸಾಕಷ್ಟು ನಿರ್ದೇಶಕರ ಜತೆಗೆ ಕೆಲಸ ಮಾಡಿರುವ ಶಿವರಾಜಕುಮಾರ್, ಕಥೆ ಆಯ್ಕೆಯ ಬಗ್ಗೆಯೂ ಮಾತನಾಡಿದ್ದಾರೆ. ‘ಯಾವ ಹುತ್ತದಲ್ಲಿ ಯಾವ ಹಾವಿರುತ್ತದೋ ಯಾರಿಗೆ ಗೊತ್ತು. ಗೆಲ್ಲುತ್ತದೆ ಎಂಬ ಸಿನಿಮಾ ಅನಿರೀಕ್ಷಿತವಾಗಿ ಸೋಲುತ್ತದೆ. ಸೋಲಲಿದೆ ಎಂಬ ಸಿನಿಮಾ ಗೆಲ್ಲುತ್ತದೆ. ಅದೇ ರೀತಿ ಹೊಸ ಹೊಸ ನಿರ್ದೇಶಕರೂ ಹಾಗೇ. ಕಥೆ ಹೇಳಲು ಮನೆಗೆ ಬಂದರೆ ಸಮಾಧಾನದಿಂದ ಕಥೆ ಕೇಳುತ್ತೇನೆ. ಇಷ್ಟವಾದರೆ ಓಕೆ, ಇಲ್ಲವಾದರೆ ಇಲ್ಲ. ಆದರೆ, ಅವರ ಮನಸ್ಸಿಗೆ ನೋವನ್ನುಂಟು ಮಾಡಲ್ಲ. ಬೆಳೆಯುವವರನ್ನು ಬೆಳೆಸುವುದು ನಮ್ಮ ಕರ್ತವ್ಯ. ಯಾರನ್ನೂ ಅಂಡರ್ ಎಸ್ಟಿಮೇಟ್ ಮಾಡಬಾರದು’ ಎನ್ನುತ್ತಾರೆ ಶಿವಣ್ಣ.

ನನ್ನ 125ನೇ ಸಿನಿಮಾ ನಮ್ಮ ಮುತ್ತು ಸಿನಿ ಕ್ರಿಯೇಷನ್ಸ್ ಬ್ಯಾನರ್​ನಲ್ಲಿಯೇ ಸಿದ್ಧವಾಗಲಿದೆ. ಆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಮಾರ್ಚ್ 11ರ ಶಿವರಾತ್ರಿ ದಿನದಂದು ಗೊತ್ತಾಗಲಿದೆ.

| ಶಿವರಾಜ್​ಕುಮಾರ್ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net