

ಬೆಂಗಳೂರು: ಇದ್ಯಾವತ್ತೋ ಆಗಬೇಕಿತ್ತು. ಅದಕ್ಕೊಂದು ಕಾಲ ಕೂಡಿಬರಲಿಲ್ಲವಾ? ಶಿವರಾಜಕುಮಾರ್ ಅವರಿಗೇ ಆಸಕ್ತಿ ಇರಲಿಲ್ಲವಾ? ಗೊತ್ತಿಲ್ಲ. ಒಟ್ಟಿನಲ್ಲಿ ಶಿವರಾಜಕುಮಾರ್ ಅವರಿಗೆ 60 ವರ್ಷಗಳಾದ ನಂತರ, ಚಿತ್ರರಂಗಕ್ಕೆ ಬಂದು 36 ವರ್ಷಗಳಾದ ಮೇಲೆ ಕ್ರಮೇಣ ಅವರು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಇಷ್ಟು ವರ್ಷ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಶಿವರಾಜಕುಮಾರ್, ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ‘ಗೌತಮಿಪುತ್ರ ಶಾತಕರ್ಣಿ’ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಅವರು ಇನ್ನೊಂದಿಷ್ಟು ಚಿತ್ರಗಳ ಮೂಲಕ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗಗಳಲ್ಲಿ ಹೆಜ್ಜೆ ಇಡುವುದಕ್ಕೆ ಹೊರಟಿದ್ದಾರೆ.
ಮೂರು ಚಿತ್ರಗಳು ಬಹುಭಾಷೆಗಳಲ್ಲಿ: ಸುಮ್ಮನೆ ಮಂಗಳವಾರ ಶಿವರಾಜಕುಮಾರ್ ಅವರ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆಯಾದ ಅಥವಾ ಬಿಡುಗಡೆಯಾದ ಫೋಸ್ಟರ್ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಇವೆಲ್ಲವೂ ಬಹುಭಾಷೆಯ ಚಿತ್ರಗಳೇ. ಈ ಪೈಕಿ ಆರ್ಜೆ ಶ್ರೀನಿ ನಿರ್ದೇಶಿಸುತ್ತಿರುವ ‘ಘೋಸ್ಟ್’ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ನಿರ್ದೇಶನದ ‘45’ ಚಿತ್ರವು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ‘ವೇದ’ ಚಿತ್ರವು ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತಿದೆ. ಯೋಗರಾಜ್ ಭಟ್ ನಿರ್ದೇಶನದ ಹೆಸರಿಡದ ಚಿತ್ರ ಸಹ ತೆಲುಗು ಮತ್ತು ತಮಿಳಿಗೆ ಡಬ್ ಆಗಿ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ, ಈ ಚಿತ್ರದಲ್ಲಿ ಶಿವರಾಜಕುಮಾರ್ ಜತೆಗೆ ಪ್ರಭುದೇವ ಸಹ ಇನ್ನೊಬ್ಬ ನಾಯಕನಾಗಿ ನಟಿಸುತ್ತಿದ್ದಾರೆ. ಅವರು ತೆಲುಗು ಮತ್ತು ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡಿರುವುದರಿಂದ, ಅದು ಸಹ ಬಹುಭಾಷಾ ಚಿತ್ರವಾಗುವ ಸಾಧ್ಯತೆ ಇದೆ. ಇದಲ್ಲದೆ ರಜನಿಕಾಂತ್ ಅವರ ‘ಜೈಲರ್’ ಎಂಬ ತಮಿಳು ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.
ಹಲವು ಹೆಗ್ಗಳಿಕೆಗಳ ನಟ: ಶಿವರಾಜಕುಮಾರ್ ಮನಸ್ಸು ಮಾಡಿದ್ದರೆ ಈ ಕೆಲಸವನ್ನು ಯಾವತ್ತೋ ಮಾಡಬಹುದಿತ್ತು. ಆದರೆ, ಯಾಕೆ ಈ ಪ್ರಯತ್ನ ಮಾಡಲಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಶಿವರಾಜಕುಮಾರ್ ಅವರ ಮೊದಲ ಚಿತ್ರ ‘ಆನಂದ್’ ಸೂಪರ್ ಹಿಟ್ ಆಯಿತು. ನಂತರದ ‘ರಥಸಪ್ತಮಿ’ ಮತ್ತು ‘ಮನ ಮೆಚ್ಚಿದ ಹುಡುಗಿ’ ಚಿತ್ರಗಳು ಗೆಲ್ಲುವ ಮೂಲಕ ‘ಹ್ಯಾಟ್ರಿಕ್ ಹೀರೋ’ ಆದರು. ನಂತರದ ವರ್ಷಗಳಲ್ಲಿ ‘ಓಂ’, ‘ನಮ್ಮೂರ ಮಂದಾರ ಹೂವೇ’, ‘ಜನುಮದ ಜೋಡಿ’, ‘ಎಕೆ 47’, ‘ಜೋಗಿ’ ಮುಂತಾದ ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟರು. ಒಂದು ಕಡೆ ಹಲವು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸುವುದರ ಜತೆಗೆ, ರಿಮೇಕ್ ಚಿತ್ರಗಳಲ್ಲೂ ಕಾಣಿಸಿಕೊಂಡರು. ಆಕ್ಷನ್, ಕಾಮಿಡಿ, ಹಾರರ್ ಎನ್ನದೆ ಎಲ್ಲ ಜಾನರ್ನ ಚಿತ್ರಗಳಲ್ಲೂ ನಟಿಸಿದರು. ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಸೇರಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ‘ಕರುನಾಡ ಚಕ್ರವರ್ತಿ’ ಎಂಬ ಬಿರುದು ಪಡೆದರು. ಮೂರು ತಲೆಮಾರಿನ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಜತೆಗೆ ಕೆಲಸ ಮಾಡಿದರು. ಈಗ 60ರಲ್ಲೂ ಅಷ್ಟೇ ಸಕ್ರಿಯವಾಗಿದ್ದು, 124 ಚಿತ್ರಗಳನ್ನು ಮಾಡಿ ಮುಗಿಸಿದ್ದಾರೆ. ಅವರ ಕೈಯಲ್ಲಿ 10ಕ್ಕೂ ಹೆಚ್ಚು ಚಿತ್ರಗಳಿದ್ದು, ಇನ್ನೊಂದು ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ.
ಇಷ್ಟೆಲ್ಲ ಆಗುತ್ತಿದ್ದರೂ, ಶಿವರಾಜಕುಮಾರ್ ಯಾಕೆ ಬೇರೆ ಭಾಷೆಗಳಲ್ಲಿ ನಟಿಸುವುದಕ್ಕೆ ಒಲವು ತೋರಲಿಲ್ಲ? ಅದಕ್ಕೊಂದು ಕಾಲ ಕೂಡಿಬರಲಿಲ್ಲವಾ? ಅಥವಾ ಅವರಿಗೇ ಆಸಕ್ತಿ ಇರಲಿಲ್ಲವಾ? ಗೊತ್ತಿಲ್ಲ. ಸ್ವಲ್ಪ ತಡವಾದರೂ, 60ರ ನಂತರವಾದರೂ ಅವರು ತಮ್ಮ ಗಡಿಯನ್ನು ವಿಸ್ತರಿಸಿಕೊಳ್ಳುತ್ತಿರುವುದು, ಬೇರೆ ಭಾಷೆಗಳಲ್ಲೂ ನಟಿಸುತ್ತಿರುವುದು ಮತ್ತು ಅವರ ಚಿತ್ರಗಳು ಬೇರೆ ರಾಜ್ಯಗಳಲ್ಲೂ ಬಿಡುಗಡೆಯಾಗುವುದಕ್ಕೆ ಹೊರಟಿರುವುದು ಕನ್ನಡಿಗರ ಪಾಲಿಗೆ ಖುಷಿಯ ವಿಚಾರ.
ಗಣ್ಯರ ಹಾರೈಕೆ: ಈ ಬಾರಿ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮವಿರಲಿಲ್ಲ.ಸಂಭ್ರಮಾಚರಣೆ ಇಲ್ಲದೆ ಅಭಿಮಾನಿಗಳಿಗೆ ಬೇಸರವಾಗಿತ್ತಾದರೂ, ಹೊಸ ಚಿತ್ರಗಳ ಪೋಸ್ಟರ್ ಬಿಡುಗಡೆ, ಕಿಚ್ಚ ಸುದೀಪ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್, ‘ದುನಿಯಾ’ ವಿಜಯ್, ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಶುಭ ಹಾರೈಕೆಗಳು ಈ ಬೇಸರವನ್ನು ಕೊಂಚ ಕಡಿಮೆ ಮಾಡಿದವು.