

ಬೆಂಗಳೂರು: ನರ್ತನ್ ನಿರ್ದೇಶನದಲ್ಲಿ 2017ರಲ್ಲಿ ತೆರೆಕಂಡಿದ್ದ ಸಿನಿಮಾ ‘ಮಫ್ತಿ’. ಶಿವರಾಜಕುಮಾರ್, ಶ್ರೀಮುರುಳಿ, ಶಾನ್ವಿ ಶ್ರೀವಾಸ್ತವ್ ನಟಿಸಿದ್ದ ಈ ಸಿನಿಮಾ ಯಶಸ್ಸು ಕಂಡಿತ್ತು. ಇದೀಗ ಅದರ ಪ್ರೀಕ್ವೆಲ್ ‘ಭೈರತಿ ರಣಗಲ್’ ಇದೇ ತಿಂಗಳ 15ರಂದು ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಯಕ ಶಿವರಾಜಕುಮಾರ್ ಮತ್ತೊಂದು ಬಿಗ್ ಅಪ್‌ಡೇಟ್ ನೀಡಿದ್ದಾರೆ. ‘ಭೈರತಿ ರಣಗಲ್’ ಬಳಿಕ ‘ಮಫ್ತಿ-2’ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ.
ಇತ್ತೀಚೆಗೆ ಚಿತ್ರದ ‘ಅಜ್ಞಾತವಾಸ’ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ, ‘‘ಮಫ್ತಿ’ ಚಿತ್ರದ ಭೈರತಿ ರಣಗಲ್ ಪಾತ್ರ ನನಗೆ ಬಹಳ ಇಷ್ಟ. ಬಳಿಕ ಈ ಕಥೆಯನ್ನು ನರ್ತನ್ ಹೇಳಿದಾಗ ಮೆಚ್ಚುಗೆಯಾಗಿ ನಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದೆವು. ಇಡೀ ಕಥೆ ಇಷ್ಟವಾಗಿದ್ದು, ‘ಮಫ್ತಿ’ ಸೀಕ್ವೆಲ್ ಕೂಡ ಮಾಡಲಿದ್ದೇವೆ’ ಎಂದು ಖಚಿತಪಡಿಸಿದರು. ‘ಭೈರತಿ ರಣಗಲ್’ನಲ್ಲಿ ಶಿವರಾಜ್‌ಕುಮಾರ್ ರುಕ್ಮಿಣಿ ವಸಂತ್ ಜೋಡಿಯಾಗಿದ್ದಾರೆ. ಜತೆಗೆ ದೇವರಾಜ್, ಅವಿನಾಶ್, ರಾಹುಲ್ ಬೋಸ್, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ, ಪ್ರತಾಪ್, ಶಬ್ಬೀರ್, ಗೋಪಾಲಕೃಷ್ಣ ದೇಶಪಾಂಡೆ ತಾರಾ ಬಳಗದಲ್ಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಚೇತನ್ ಡಿ’ಸೋಜಾ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಟ್ರೇಲರ್‌ನಲ್ಲಿ ‘ಭೈರತಿ ರಣಗಲ್’: ‘ಭೈರತಿ ರಣಗಲ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನೀರಿನ ವಿಚಾರವಾಗಿ ನಡೆಯುವ ಘಟನೆಯಿಂದ ಆರಂಭವಾಗುವ ಟ್ರೇಲರ್‌ನಲ್ಲಿ, ಒಬ್ಬ ಸಾಮಾನ್ಯ ವಕೀಲ, ಸಾವಿರಾರು ಬಡ ಜನರ ಪರ ನಿಲ್ಲಲು ಕಾರಣವೇನು? ಈ ರಣಗಲ್ ರೋಣಾಪುರದಲ್ಲಿ ತನ್ನದೇ ಮೈಲಿಗಲ್ಲು ಸಾಧಿಸಲು ಯಾಕೆ ಮುಂದಾಗುತ್ತಾನೆ? ಎಂಬುದರ ಸುತ್ತ ಸಾಗುತ್ತದೆ. ‘ಜನರಿಗೋಸ್ಕರ ನಾನು ಯಾರನ್ನಾ ಬೇಕಾದರೂ ಕಳೆದುಕೊಳ್ತೀನಿ, ಆದ್ರೇ ಜನರನ್ನೇ ಕಳೆದುಕೊಳ್ಳೋಕೆ ಇಷ್ಟಪಡಲ್ಲ’ ಎಂಬ ಶಿವಣ್ಣ ಡೈಲಾಗ್ ಮಿಂಚು ಹರಿಸುತ್ತದೆ. ಒಟ್ಟಾರೆ ಟ್ರೇಲರ್ ಮೂಲಕವೇ ‘ಭೈರತಿ ರಣಗಲ್’ ಕುತೂಹಲ, ನಿರೀಕ್ಷೆ ಹೆಚ್ಚಿಸುವಲ್ಲಿ ಸಕ್ಸಸ್ ಆಗಿದೆ.