ಶಿವಣ್ಣ @ 60: ಹ್ಯಾಟ್ರಿಕ್ ಹೀರೋ ಕೈಯಲ್ಲಿವೆ 8 ಚಿತ್ರಗಳು..

SRK
Published on

ಬೆಂಗಳೂರು: ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆಯಲ್ಲಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಒಂದು ತಿಂಗಳ ಮೊದಲೇ ಹೇಳಿಬಿಟ್ಟಿದ್ದರು ಶಿವರಾಜಕುಮಾರ್. ಇಲ್ಲವಾದರೆ, ಈ ಬಾರಿ ಅವರ ಹುಟ್ಟುಹಬ್ಬವನ್ನು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುವುದಕ್ಕೆ ಅಭಿಮಾನಿಗಳು ತೀರ್ವನಿಸಿದ್ದರು. ಏಕೆಂದರೆ, ಇದು ಶಿವರಾಜಕುಮಾರ್ ಅವರ 60ನೇ ಹುಟ್ಟುಹಬ್ಬ. ಆದರೆ, ಶಿವರಾಜಕುಮಾರ್ ಅವರೇ ಸಂಭ್ರಮ ಬೇಡ ಎಂದಿರುವುದರಿಂದ ಸರಳವಾಗಿ ಅವರ ಹುಟ್ಟುಹಬ್ಬ ಆಚರಣೆಯಾಗಲಿದೆ.

ಅಂದಹಾಗೆ, ಇಂದು ಅವರ ಮೂರು ಚಿತ್ರಗಳ ಪೋಸ್ಟರ್​ಗಳು ಬಿಡುಗಡೆಯಾಗುತ್ತಿರುವುದು ವಿಶೇಷ. ಈಗಾಗಲೇ ಸಂದೇಶ್ ನಾಗರಾಜ್ ನಿರ್ವಣದ ಮತ್ತು ಆರ್​ಜೆ ಶ್ರೀನಿ ನಿರ್ದೇಶನದ ‘ಘೋಸ್ಟ್’, ಸಚಿನ್ ನಿರ್ಮಾಣ ಮತ್ತು ನಿರ್ದೇಶನದ ‘ಅಶ್ವತ್ಥಾಮ’ ಹಾಗೂ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ‘45’ ಎಂಬ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸುತ್ತಿರುವುದು ಸುದ್ದಿಯಾಗಿದೆ. ಈ ಕುರಿತು ಇಂದು ಅಧಿಕೃತ ಘೋಷಣೆಯಾಗಿದ್ದು, ಈ ಮೂರೂ ಚಿತ್ರಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ಮೂರೂ ಚಿತ್ರಗಳನ್ನು ಸೇರಿಸಿದರೆ ಶಿವರಾಜಕುಮಾರ್ ಕೈಯಲ್ಲಿ ಒಟ್ಟು ಎಂಟು ಚಿತ್ರಗಳಾದಂತಾಗುತ್ತವೆ. ಈಗಾಗಲೇ ಶಿವರಾಜಕುಮಾರ್ ಅವರ 125ನೇ ಚಿತ್ರ ‘ವೇದ’ ಬಹುತೇಕ ಮುಗಿದಿದೆ. ‘ನೀ ಸಿಗೋವರೆಗೂ’ ಮತ್ತು ರಾಕ್​ಲೈನ್ ವೆಂಕಟೇಶ್ ನಿರ್ವಣದ ಹೊಸ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಜತೆಗೆ ‘ಘೋಸ್ಟ್’, ‘ಅಶ್ವತ್ಥಾಮ’ ಮತ್ತು ‘45’. ಇದಲ್ಲದೆ, ಕೊಟ್ರೇಶ್ ನಿರ್ದೇಶನದ ಹೆಸರಿಡದ ಚಿತ್ರ, ರಜನಿಕಾಂತ್ ಅಭಿನಯದ ‘ಜೈಲರ್’ನಲ್ಲಿ ಅತಿಥಿ ಪಾತ್ರ ... ಸೇರಿಸಿದರೆ ಒಟ್ಟು ಅವರ ಕೈಯಲ್ಲಿ ಎಂಟು ಚಿತ್ರಗಳಾದಂತಾಗುತ್ತದೆ.

ಸೆಲೆಬ್ರಿಟಿಗಳಿಂದ ಸಿಡಿಪಿ ಬಿಡುಗಡೆ: ವಿಶೇಷವಾದ ಕಾಮನ್ ಡಿಸ್​ಪ್ಲೇ ಪಿಚ್ಚರ್ (ಸಿಡಿಪಿ) ಮಾಡಿಸಿರುವ ಅಭಿಮಾನಿಗಳು ಅದನ್ನು ಹಲವರು ಸೆಲೆಬ್ರಿಟಿಗಳಿಂದ ಬಿಡುಗಡೆ ಮಾಡಿಸಿದ್ದಾರೆ. ಧನಂಜಯ, ಯೋಗರಾಜ್​ಭಟ್, ಸಂತೋಷ್ ಆನಂದರಾಮ್ ಪವನ್ ಒಡೆಯರ್ ಮುಂತಾದವರು ಈ ಸಿಡಿಪಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net