ಇನ್ನೊಂದು ಹೊಸ ಚಿತ್ರದಲ್ಲಿ ಶಿವರಾಜಕುಮಾರ್​

Shivarajakumar - Final
Published on

ಬೆಂಗಳೂರು: ಶಿವರಾಜಕುಮಾರ್​ ಕೈಯಲ್ಲಿ ಸದ್ಯಕ್ಕೆ ಎಷ್ಟು ಸಿನಿಮಾಗಳಿವೆಯೋ ಲೆಕ್ಕ ಇಡುವುದು ಕಷ್ಟ. ಈಗಾಗಲೇ ಅವರು 'ಭಜರಂಗಿ 2' ಚಿತ್ರವನ್ನು ಮುಗಿಸಿದ್ದಾರೆ. ಅದಲ್ಲದೆ 'ಆರ್​ಡಿಎಕ್ಸ್​', 'ಭೈರತಿ ರಣಗಲ್ಲು', ವಿಜಯ್​ ಮಿಲ್ಟನ್​ ನಿರ್ದೇಶನದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಈಗಾಗಲೇ ಸುದ್ದಿಯಾಗಿದೆ. ಇತ್ತೀಚೆಗಷ್ಟೇ, ಯೋಗರಾಜ್​ ಭಟ್​ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಅವರು ನಟಿಸುತ್ತಾರೆ ಎಂದು ಸುದ್ದಿಯಾಗಿದೆ.

ಅದೆಲ್ಲದರ ಜತೆಗೆ, ಶಿವಣ್ಣ ಇನ್ನೊಂದು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಈ ಬಾರಿ ಅವರನ್ನು ನಿರ್ದೇಶಿಸುತ್ತಿರುವವರು ಹೊಸ ನಿರ್ದೇಶಕರು. ಈ ಹಿಂದೆ ಎ. ಹರ್ಷ, ಯೋಗಿ ಜಿ ರಾಜ್​ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕೊಟ್ರೇಶ್​, ಈಗ ಹೊಸ ಚಿತ್ರವೊಂದನ್ನು ನಿರ್ದೇಶಿಸುವುದಕ್ಕೆ ಸಜ್ಜಾಗಿದ್ದಾರೆ. ಅದಕ್ಕೆ ಶಿವಣ್ಣ ಹೀರೋ ಆಗುವುದಕ್ಕೆ ಒಪ್ಪಿಕೊಂಡಿದ್ದಾರಂತೆ.

ಈ ಕುರಿತು ಮಾತನಾಡುವ ಕೊಟ್ರೇಶ್​ ಚಪ್ಪರದಹಳ್ಳಿ, 'ಸಾಮಾಜಿಕ ಕಾಳಜಿ ಇರುವ ಈ ಚಿತ್ರದ ಕಥೆಯನ್ನು ಶಿವರಾಜಕುಮಾರ್​ ಅವರಿಗೆ ಹೇಳಿದಾಗ, ಅವರು ಕಥೆ ಮೆಚ್ಚಿಕೊಂಡು ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅವರ ಪ್ರೋತ್ಸಾಹ ನನ್ನಂತಹ ಹೊಸಬರಿಗೆ ಕೆಲಸ ಮಾಡುವುದಕ್ಕೆ ಇನ್ನುಷ್ಟು ಸ್ಫೂರ್ತಿದಾಯಕ' ಎನ್ನುತ್ತಾರೆ ಕೊಟ್ರೇಶ್​.

ಈ ಚಿತ್ರವನ್ನು ಎ.ಆರ್​.ಕೆ ಪ್ರೊಡಕ್ಷನ್ಸ್​ ಲಾಂಛನದಲ್ಲಿ ಚೌಧರಿ ಎನ್ನುವವರು ನಿರ್ಮಿಸುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ಕಥೆ ಓಕೆ ಆಗಿದೆ. ಮಿಕ್ಕಂತೆ ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಸದ್ಯಕ್ಕೆ ಒಪ್ಪಿರುವ ಚಿತ್ರಗಳನ್ನು ಮುಗಿಸಿದ ನಂತರ, ಮುಂದಿನ ವರ್ಷ ಈ ಚಿತ್ರದಲ್ಲಿ ಶಿವರಾಜಕುಮಾರ್​ ನಟಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net