ಸತ್ಯಮಂಗಳ ಕಾಡಲ್ಲಿ ಶಿವರಾಜಕುಮಾರ್

Lohith
Published on

ಬೆಂಗಳೂರು: ಶಿವರಾಜಕುಮಾರ್ ಅಭಿನಯದ ‘ನೀ ಸಿಗೋವರೆಗೂ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅಷ್ಟರಲ್ಲೇ ಅವರ ಇನ್ನೊಂದು ಹೊಸ ಚಿತ್ರ ‘ಸತ್ಯಮಂಗಳ’ ಶುಕ್ರವಾರದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಘೋಷಣೆಯಾಗಿದೆ. 2022ರಲ್ಲಿ ಶುರುವಾಗುವ ಈ ಚಿತ್ರವನ್ನು ‘ಬೈರಾಗಿ’ ನಿರ್ಮಾಪಕ ಕೃಷ್ಣ ಸಾರ್ಥಕ್ ನಿರ್ವಿುಸಿದರೆ, ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳ ನಿರ್ದೇಶಕ ಲೋಹಿತ್ ನಿರ್ದೇಶನ ಮಾಡುತ್ತಿದ್ದಾರೆ.

‘ಸತ್ಯಮಂಗಳ’ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ ಕೃಷ್ಣಸಾರ್ಥಕ್, ‘ಕೆಲವು ತಿಂಗಳ ಹಿಂದೆ ಲೋಹಿತ್ ನನಗೊಂದು ಕಥೆ ಹೇಳಿದ್ದರು. ನನಗೆ ಬಹಳ ಇಷ್ಟವಾಗಿತ್ತು. ಅದನ್ನೇ ಶಿವಣ್ಣ ಅವರಿಗೆ ಹೇಳಿದ್ದೆ. ಅವರು ಕಥೆ ಕೇಳಿ ಥ್ರಿಲ್ ಆಗಿ ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೊಂದು ವಿಭಿನ್ನ ಆಕ್ಷನ್ ಚಿತ್ರವಾಗಲಿದೆ’ ಎನ್ನುತ್ತಾರೆ. ಇನ್ನು ಲೋಹಿತ್, ಶಿವರಾಜಕುಮಾರ್ ಅವರ ದೊಡ್ಡ ಅಭಿಮಾನಿಯಂತೆ.

‘ಅವರ ಎಲ್ಲ ಚಿತ್ರಗಳನ್ನು ನೋಡಿಕೊಂಡು ಬೆಳೆದವನು ನಾನು. ಇದುವರೆಗೂ ಅವರು ಮಾಡಿದಕ್ಕಿಂತ ವಿಭಿನ್ನ ಚಿತ್ರ ಇದಾಗಲಿದೆ. ಇದೊಂದು ಸಾಹಸಮಯ ಚಿತ್ರ. ಪೋಸ್ಟರ್​ನಲ್ಲಿ ಕಾಣುವ ಕರಿಚಿರತೆ, ಗಾಂಜಾಗಿಡ ಎಲ್ಲವೂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎನ್ನುತ್ತಾರವರು. ಸದ್ಯದ ‘ಸತ್ಯಮಂಗಳ’ ಪೋಸ್ಟರ್​ನಲ್ಲಿ ಅರಣ್ಯ ಮತ್ತು ಕರಿಚಿರತೆಯ ಚಿತ್ರಣವಿದೆ. ಹಾಗಾಗಿ ವೀರಪ್ಪನ್​ಗೆ ಸಂಬಂಧಿಸಿದ ಚಿತ್ರವೇ ಎಂದರೆ ಆ ಬಗ್ಗೆ ತುಟಿ ಬಿಚ್ಚುವುದಿಲ್ಲ ಲೋಹಿತ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net