

ಚೇತನ್ ನಾಡಿಗೇರ್
ಬೆಂಗಳೂರು: ಇಂದು ಶಿವರಾಜಕುಮಾರ್ ಹುಟ್ಟುಹಬ್ಬ. ಪ್ರತೀ ವರ್ಷದಂತೆ ಆಗಿದ್ದರೆ, ನಿನ್ನೆ ರಾತ್ರಿಯಿಂದಲೇ ಅವರ ಮನೆಯ ಮುಂದೆ ಅಭಿಮಾನಿಗಳು ಜಮಯಾಯಿಸುತ್ತಿದ್ದರು. ಇಂದು ಪೂರ್ತಿ ಶಿವರಾಜಕುಮಾರ್ ಅವರರನ್ನು ಅಭಿಮಾನದಿಂದ ಮಿಂದೇಳಿಸುತ್ತಿದ್ದರು. ಆದರೆ, ಈ ಬಾರಿ ಹಾಗಿಲ್ಲ. ಕರೊನಾ ಹಾವಳಿ ಜಾಸ್ತಿ ಇರುವುದರಿಂದ, ಈಗಾಗಲೇ ಹಲವು ಸ್ಟಾರ್ಗಳು ತಮ್ಮ ಹುಟ್ಟುಹಬ್ಬವನ್ನು ರದ್ದು ಮಾಡಿ, ಸರಳವಾಗಿ ಆಚರಿಸಿಕೊಂಡಿದ್ದಾರೆ. ಶಿವರಾಜಕುಮಾರ್ ಸಹ ಒಂದು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಮನೆ ಹತ್ತಿರ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ. ಇದಲ್ಲೇ ಶುಭ ಹಾರೈಸುವುದಕ್ಕೆ ಕೇಳಿಕೊಂಡಿದ್ದಾರೆ.
‘ಭಜರಂಗಿ 2’ ಟೀಸರ್ ಬಿಡುಗಡೆ ಶಿವರಾಜಕುಮಾರ್ ಅಭಿನಯದ ‘ಭಜರಂಗಿ 2’ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಕ್ಕೆ ಬಂದಿತ್ತು ಎನ್ನುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಯಿತು. ಇಂದು ಶಿವರಾಜಕುಮಾರ್ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ, ಚಿತ್ರತಂಡವು ‘ಭಜರಂಗಿ 2’ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಶಿವರಾಜಕುಮಾರ್, ‘ಚಿತ್ರದ ಬಗ್ಗೆ ನಾನು ಹೇಳುವುದಕ್ಕಿಂತ ನೀವೇ ನೋಡಬೇಕು. ಹರ್ಷ ವಿಭಿನ್ನವಾದ ಪ್ರಯತ್ನ ಮಾಡಿದ್ದಾರೆ. ಟೀಸರ್ನಲ್ಲೇ ಏನೋ ಹೇಳೋಕೆ ಹೊರಟಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ.
ಇನ್ನು ಈ ಹುಟ್ಟುಹಬ್ಬದ ಸಂದರ್ಭದಲ್ಲಿ ವರುಣ್ ಸ್ಟುಡಿಯೋಸ್ ಕಡೆಯಿಂದದ ಹೊಸ ಹಾಡು ಹೊರತಂದಿದ್ದು, ಅದನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ‘ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಒಂದಿಷ್ಟು ಕೆಲಸ ಒಳ್ಳೆಯ ಮಾಡುತ್ತಿದ್ದಾರೆ. ಕೆಲವರು ಹಾಡನ್ನು ಡೆಡಿಕೇಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅಗತ್ಯವಿರುವವವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ಶಿವರಾಜಕುಮಾರ್.
ಜಿಮ್ನಲ್ಲೇ ಬಹಳಷ್ಟು ಸಮಯ ಕಳೆದೆ: ಚಿತ್ರರಂಗಕ್ಕೆ ಬಂದ ಈ 34 ವರ್ಷಗಳಲ್ಲಿ, ಶಿವರಾಜಕುಮಾರ್ ಯಾವತ್ತೂ ಇಷ್ಟೊಂದು ದಿನಗಳ ಕಾಲ ಶೂಟಿಂಗ್ನಿಂದ ದೂರ ಇರಲೇ ಇಲ್ಲ. ಸದಾ ಬಿಜಿಯಾಗಿರುತ್ತಿದ್ದ ಅವರು, ಲಾಕ್ಡೌನ್ ಸಮಯವನ್ನು ಹೇಗೆ ಕಳೆದರು ಎಂಬ ಪ್ರಶ್ನೆಗೆ, ಜಿಮ್ ಎಂದು ಉತ್ತರಿಸುತ್ತಾರೆ ಅವರು. ‘ಪ್ರತಿ ದಿನ ನಾಲ್ಕರಿಂದ ಐದು ತಾಸು ಜಿಮ್ಲ್ಲಿ ಕಳೆಯುತ್ತಿದ್ದೆ. ಸಮಯವನ್ನು ಕಳೆಯುವುದಕ್ಕೆ ಅದಕ್ಕಿಂತ ಇನ್ನೊಂದು ಆಪ್ಶನ್ ಇಲ್ಲ. ಜತೆಗೆ ವೆಬ್ ಸೀರೀಸ್ ನೋಡೋದು, ಸಿನಿಮಾ ನೋಡೋದು ... ಇದೇ ತರಹ ಲಾಕ್ಡೌನ್ ಕಳೆದೆ’ ಎನ್ನತ್ತಾರೆ ಅವರು.
ವರಮಹಾಲಕ್ಷ್ಮೀ ಹಬ್ಬಕ್ಕೆ ಹೊಸ ಚಿತ್ರ: ಈ ಮಧ್ಯೆ ಅವರು ಎರಡು ಕಥೆಗಳನ್ನು ಕೇಳಿ, ಚಿತ್ರ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
ಈ ಪೈಕಿ ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರವೂ ಒಂದು. ‘ವಿಜಯ್ ಮಿಲ್ಟನ್ ಹೇಳಿದ ಕಥೆ ಇಷ್ಟವಾಯಿತು. ಅದರಲ್ಲಿ ಧನಂಜಯ್ ಸಹ ನನ್ನ ಜತೆಗೆ ನಟಿಸುತ್ತಿದ್ದಾರೆ. ಅದೊಂದು ಒಳ್ಳೆಯ ಕಾಂಬಿನೇಷನ್ ಚಿತ್ರವಾಗುತ್ತದೆ ಎಂಬ ನಂಬಿಕೆ ನನಗಿದೆ. ಇದಲ್ಲದೆ ಇನ್ನೊಂದು ಚಿತ್ರ ಸಹ ಒಪ್ಪಿದ್ದೇನೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರದ ಟೈಟಲ್, ನಿರ್ದೇಶಕರ ಹೆಸರು ಎಲ್ಲವೂ ರಿವೀಲ್ ಆಗಲಿದೆ’ ಎಂದು ಒಪ್ಪಿರುವ ಹೊಸ ಚಿತ್ರಗಳ ಬಗ್ಗೆ ಹೇಳುತ್ತಾರೆ.
ಕೃಷಿಯ ಬಗ್ಗೆ ಆಸಕ್ತಿ ಇದ್ದೇ ಇದೆ: ಈ ಮಧ್ಯೆ, ಶಿವರಾಜಕುಮಾರ್ ಅವರು ನಿರ್ದೇಶಕ ಚಂದ್ರು ಅವರ ತೋಟಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಶಿವರಾಜಕುಮಾರ್ ಸಹ ಸದ್ಯದಲ್ಲೇ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಈ ಕುರಿತು ಮಾತನಾಡುವ ಅವರು, ‘ಚಂದ್ರ ಬಹಳ ದಿನಗಳಿಂದ ತಮ್ಮ ತೋಟಕ್ಕೆ ಕರೆಯುತ್ತಿದ್ದರು. ಅದಕ್ಕೇ ಹೋಗಿದ್ದೆವು. ಇನ್ನು ಕೃಷಿಯ ಬಗ್ಗೆ ಯಾವತ್ತೂ ಆಸಕ್ತಿ ಇದ್ದೇ ಇದೆ. ಮುಂದಿನ ದಿನಗಳಲ್ಲಿ ಅದನ್ನೂ ಪ್ರಯತ್ನ ಮಾಡುವ ಯೋಚನೆ ಇದೆ. ಅದಕ್ಕಿನ್ನೂ ಸಮಯ ಬರಬೇಕು’ ಎಂದು ಮಾತು ಮುಗಿಸುತ್ತಾರೆ.