ವಿಜಯ್ ಮಿಲ್ಟನ್ ಚಿತ್ರದಲ್ಲಿ ಶಿವಣ್ಣ

Shivarajkumar
Published on

ಬೆಂಗಳೂರು: ನಂದಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿರುವ ವಿಜಯ್ ಮಿಲ್ಟನ್ ಸದ್ಯ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್! ಹೌದು, ಶಿವಣ್ಣ ನಟನೆಯ 124ನೇ ಚಿತ್ರಕ್ಕೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡುತ್ತಿದೆ. ಸದ್ಯ ‘ಭಜರಂಗಿ 2’ ಮತ್ತು ರವಿ ಅರಸು ನಿರ್ದೇಶನದಲ್ಲಿ ತಯಾರಾಗಲಿರುವ ‘ಆರ್​ಡಿಎಕ್ಸ್’ ಚಿತ್ರದಲ್ಲಿ ಶಿವಣ್ಣ ಬಿಜಿಯಾಗಿದ್ದು, ಈ ಎರಡು ಸಿನಿಮಾ ಕೆಲಸಗಳು ಮುಗಿಯುತ್ತಿದ್ದಂತೆ, ಮಿಲ್ಟನ್ ಜತೆ ಕೈ ಜೋಡಿಸಲಿದ್ದಾರಂತೆ. ಅಷ್ಟೇ ಅಲ್ಲ ‘ಟಗರು’ ಚಿತ್ರದಲ್ಲಿ ಶಿವಣ್ಣನೆದುರಿಗೆ ಖಳನಾಗಿ ಅಬ್ಬರಿಸಿದ್ದ ಡಾಲಿ ಧನಂಜಯ ಸಹ ಈ ಹೊಸ ಸಿನಿಮಾದಲ್ಲಿರಲಿದ್ದಾರಂತೆ. ಅಷ್ಟೇ ಅಲ್ಲ ಇನ್ನೋರ್ವ ನಾಯಕನ ಎಂಟ್ರಿಯೂ ಆಗಲಿದೆಯಂತೆ. ಈಗಾಗಲೇ ಶಿವರಾಜ್​ಕುಮಾರ್​ಗೆ ಚಿತ್ರದ ಪೂರ್ತಿ ಕಥೆಯನ್ನು ಹೇಳಿರುವ ಮಿಲ್ಟನ್, ಅವರಿಂದ ಹಸಿರು ನಿಶಾನೆಯನ್ನೂ ಗಿಟ್ಟಿಸಿಕೊಂಡಿದ್ದಾರಂತೆ. ಛಾಯಾಗ್ರಹಣದ ಜತೆಗೆ ನಿರ್ದೇಶಕನಾಗಿಯೂ ಮಿಲ್ಟನ್ ಯಶಸ್ಸು ಕಂಡಿದ್ದಾರೆ. ‘ಗೋಲಿಸೋಡ’, ‘10 ಎಂದ್ರಾತುಕುಳ್ಳ’, ‘ಕಡಗು’, ‘ಗೋಲಿಸೋಡ 2’ ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದಾರೆ. ಇದೀಗ ಮೊದಲ ಬಾರಿ ಶಿವಣ್ಣನ ಸಿನಿಮಾದ ಜತೆಗೆ ಕನ್ನಡಕ್ಕೂ ನಿರ್ದೇಶಕನಾಗಿ ಪಾದಾರ್ಪಣೆ ಮಾಡುವ ತುಡಿತದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net