

ಬೆಂಗಳೂರು: ಶಿವರಾಜಕುಮಾರ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ 'ಭಜರಂಗಿ 2', 'ಬೈರಾಗಿ' ಚಿತ್ರತಂಡಗಳು ಟೀಸರ್ ಬಿಡುಗಡೆ ಮೂಲಕ ಶಿವರಾಜಕುಮಾರ್ ಅವರಿಗೆ ಶುಭ ಕೋರಿವೆ. ಇನ್ನು, 'ಶಿವಣ್ಣ 124' ಚಿತ್ರತಂಡದವರು ಸಹ ಒಂದು ಹೊಸ ಪೋಸ್ಟರ್ ಬಿಡುಗಡೆ ಮಾಡಿ. ಶುಭ ಹಾರೈಸಿದ್ದಾರೆ.
'ಶಿವಣ್ಣ 124' ಎನ್ನುವುದು ಚಿತ್ರದ ಹೆಸರಲ್ಲ. ಅದು ಶಿವರಾಜಕುಮಾರ್ ಅಭಿನಯದ 124ನೇ ಚಿತ್ರ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲವಾದ್ದರಿಂದ, ಚಿತ್ರವನ್ನು ಸದ್ಯ 'ಶಿವಣ್ಣ 124' ಎಂಬ ಹೆಸರಲ್ಲಿ ಕರೆಯಲಾಗುತ್ತಿದೆ. ಸದ್ಯದಲ್ಲೇ ಚಿತ್ರಕ್ಕೊಂದು ಹೆಸರು ಫಿಕ್ಸ್ ಮಾಡಿ, ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರವನ್ನು ರಾಮ್ ದುಲಿಪುಡಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ 70 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಹೆಸರಾಂತ ನಟಿಯೊಬ್ಬರು ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಸದ್ಯದಲ್ಲೇ ಇದರ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ. ಇನ್ನು, ದಕ್ಷಿಣ ಭಾರತೀಯ ಚಿತ್ರರಂಗದ ಜನಪ್ರಿಯ ನಟರಾದ ನಾಜರ್ ಹಾಗೂ ಸಂಪತ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಮಂಗ್ಲಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
'ಶಿವಣ್ಣ 124' ಚಿತ್ರಕ್ಕೆ 'ಟಗರು' ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶಿಸುತ್ತಿದ್ದು, ರವಿಕುಮಾರ್ ಸನಾ ಛಾಯಾಗ್ರಹಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.