ರಣಗಿರಿ ಲೊಕೇಷನ್ ರಹಸ್ಯ!

NB 7
Published on

ಬೆಂಗಳೂರು: ನಟ ರಮೇಶ್ ಅರವಿಂದ್ ಅವರು ‘ಶಿವಾಜಿ ಸುರತ್ಕಲ್’ ಆಗಿ ‘ದ ಕೇಸ್ ಆಫ್ ರಣಗಿರಿ ರಹಸ್ಯ’ದ ಹಿಂದೆ ಬಿದ್ದಿರುವುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಇದಕ್ಕೂ ಮುನ್ನ ರಣಗಿರಿಯ ಲೊಕೇಷನ್​ಗಾಗಿ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಹುಡುಕಾಟ ನಡೆಸಿದೆಯಂತೆ. ಚಿತ್ರಕಥೆಯ ಕೇಂದ್ರವಾಗಿರುವಂಥ ಕಾಲ್ಪನಿಕ ರಣಗಿರಿಯನ್ನು ದೃಶ್ಯಾತ್ಮಕವಾಗಿ ಕಟ್ಟಿಕೊಡಲು ಸೂಕ್ತ ಸ್ಥಳಕ್ಕಾಗಿ ಚಿತ್ರತಂಡ ನಡೆಸಿದ 6 ತಿಂಗಳ ಸುತ್ತಾಟದ್ದೇ ದೊಡ್ಡ ಕಥೆಯಂತೆ.

ಸಕಲೇಶಪುರದ ಪ್ರಕೃತಿಸೌಂದರ್ಯದ ಸ್ಥಳವನ್ನೇ ‘ಗಾಳಿಪಟ’ ಚಿತ್ರದಲ್ಲಿ ‘ಮುಗಿಲುಪೇಟೆ’ ಆಗಿ ತೋರಿಸಿದ್ದರು ನಿರ್ದೇಶಕ ಯೋಗರಾಜ್ ಭಟ್. ಅಂಥದ್ದೇ ಒಂದು ಪ್ರಯತ್ನವನ್ನು ‘ಶಿವಾಜಿ ಸುರತ್ಕಲ್’ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಮಾಡಿದ್ದಾರೆ. ಅವರು ಮಡಿಕೇರಿ ಬಳಿಯ ಶುಂಠಿಕೊಪ್ಪದ ಪ್ರದೇಶವೊಂದನ್ನೇ ರಣಗಿರಿಯಾಗಿ ಚಿತ್ರೀಕರಿಸಿದ್ದಾರೆ. ಸಿನಿಮಾದಲ್ಲಿ ಇದು ಕೇರಳ ಮಡಿಕೇರಿ ಮಧ್ಯೆ ಬರುವಂಥ ಒಂದು ಸ್ಥಳ.

‘ಕಥೆ ಬರೆದಾಗಲೇ ಲೊಕೇಷನ್ ಬಗ್ಗೆ ಮನಸ್ಸಿನಲ್ಲಿ ಸ್ಪಷ್ಟ ಕಲ್ಪನೆ ಇತ್ತು. ಅಂಥ ಲೊಕೇಷನ್​ಗಾಗಿ ಗೂಗಲ್ ಮೂಲಕ ದಕ್ಷಿಣ ಭಾರತದ 120 ಲೊಕೇಷನ್​ಗಳನ್ನು ಗುರುತಿಸಿಕೊಂಡಿದ್ದೆವು. ಆ ಪೈಕಿ 30 ಸ್ಥಳಗಳನ್ನು ಅಂತಿಮ ಪಟ್ಟಿಯಲ್ಲಿ ಸೇರಿಸಿಕೊಂಡು ಅವುಗಳ ವೀಕ್ಷಣೆಗಾಗಿ ಕೊಡೈಕೆನಾಲ್, ಗೋವಾ, ಪುದುಚೇರಿ, ಕೇರಳ, ವಯನಾಡ್ ಮುಂತಾದ ಪ್ರದೇಶಗಳಿಗೆ ಹೋಗಿ ಪರಿಶೀಲಿಸಿದ್ದೆವು. ಕೊನೆಯಲ್ಲಿ ಶುಂಠಿಕೊಪ್ಪವೇ ಸೂಕ್ತ ಎಂದುಕೊಂಡು ಅದನ್ನು ಆರಿಸಿಕೊಂಡೆವು’ ಎಂದರು ಆಕಾಶ್.

‘ಈ ಚಿತ್ರವೊಂದು ಅದ್ಭುತ ಶ್ರಾವ್ಯಾನುಭವ. ಸಿನಿಮಾದ ಸೌಂಡ್ ಎಫೆಕ್ಟ್​ಗಾಗಿ ಡಾಲ್ಬಿ ಅಟ್ಮೋಸ್ ತಂತ್ರಜ್ಞಾನ ಬಳಸಲಾಗಿದೆ. ಸಿನಿಮಾದಲ್ಲಿನ ಪ್ರತಿ ಶಬ್ದವೂ ವಿಶೇಷ ಹಾಗೂ ಪರಿಣಾಮಕಾರಿಯಾಗಿ ಕೇಳಿಸಲಿದ್ದು, ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ. ಹೀಗಾಗಿ ಈ ಚಿತ್ರವನ್ನು ಸೂಕ್ತ ಚಿತ್ರಮಂದಿರಗಳಲ್ಲೇ ನೋಡಬೇಕು. ಶಬ್ದ ಅದ್ಭುತವಾಗಿ ಮೂಡಿಬರಲು ಜೂಡಾ ಸ್ಯಾಂಡಿ ಅವರ ಹಿನ್ನೆಲೆ ಸಂಗೀತ, ರಾಜನ್ ಅವರ ಸೌಂಡ್ ಎಫೆಕ್ಟ್, ಸತೀಶ್ ಕುಮಾರ್ ಅವರ ಮಿಕ್ಸಿಂಗ್ ಇದೆ’ ಎನ್ನುತ್ತಾರೆ ನಿರ್ದೇಶಕರು. ಸಿನಿಮಾ ಇದೇ ಶುಕ್ರವಾರ (ಫೆ. 21) ಬಿಡುಗಡೆ ಆಗಲಿದೆ.

ಇದು ಪತ್ತೇದಾರಿ ಕ್ರೖೆಮ್ ಕಥೆಯ ಚಿತ್ರವಾದ್ದರಿಂದ ಒಂದು ಸನ್ನಿವೇಶವನ್ನು ಎಲ್ಲ ಕೋನದಿಂದಲೂ ತೋರಿಸಬೇಕಾಗುತ್ತದೆ. ಹೀಗಾಗಿ ಅಂಥ ಸನ್ನಿವೇಶಕ್ಕೆ ಸಂಬಂಧಿತ ದೃಶ್ಯಗಳನ್ನು ಒಂದೊಂದು ಆಂಗಲ್​ನಿಂದ ಒಂದೊಂದು ಕಡೆ ಶೂಟಿಂಗ್ ನಡೆಸಿ ಜೋಡಿಸುವುದು ಅಸಾಧ್ಯ. ಸೆಟ್ ಹಾಕಿದರೂ ಸಹಜತೆ ಇರುವುದಿಲ್ಲ. ಆದ್ದರಿಂದ ಎಷ್ಟೇ ಕಷ್ಟವಾದರೂ ಕಥೆ- ಸನ್ನಿವೇಶಕ್ಕೆ ಸೂಕ್ತ ಲೊಕೇಷನ್ ಹುಡುಕಿ ಶೂಟಿಂಗ್ ನಡೆಸಿದ್ದೇವೆ. | ಆಕಾಶ್ ಶ್ರೀವತ್ಸ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net