ಮಾಯಾವಿ ಯಾರು? 'ಶಿವಾಜಿ ಸುರತ್ಕಲ್ 2' ಟ್ರೇಲರ್ ಬಿಡುಗಡೆ …

Shivaji Suratkal - Trailer Release
Published on

ಬೆಂಗಳೂರು: 'ಶಿವಾಜಿ ಸುರತ್ಕಲ್​' ಚಿತ್ರವು 2020ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿ ಹಿಟ್​ ಆಗಿತ್ತು. ಆ ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ, ಸೀಕ್ವೆಲ್​ ಬಗ್ಗೆ ಮಾತು ಕೇಳಿ ಬಂದಿತ್ತು. ಅದಕ್ಕೆ ಸರಿಯಾಗಿ ಲಾಕ್​ಡೌನ್​ ಸಮಯದಲ್ಲಿ ಈ ಕಥೆಯನ್ನು ಹೇಗೆ ಮುಂದುವರೆಸಬಹುದು ಎಂದು ಯೋಚಿಸುತ್ತಿದ್ದಾಗ, 'ದಿ ಕೇಸ್​ ಆಫ್ ಮಾಯಾವಿ'ಯ ಕಥೆ ಹೊಳೆಯಿತಂತೆ. ಈಗ ಆ ಚಿತ್ರವು ಮುಗಿದು ಬಿಡುಗಡೆಯ ಹಂತಕ್ಕೆ ಬಂದಿದೆ.

ರಮೇಶ್​ ಅರವಿಂದ್​ ಅಭಿನಯದ 'ಶಿವಾಜಿ ಸುರತ್ಕಲ್​ 2' ಚಿತ್ರವು ಏಪ್ರಿಲ್​ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಟ್ರೇಲರ್​ ಬಿಡುಗಡೆಯಾಗಿದ್ದು, ವೀಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.

ಈ ಚಿತ್ರ ಶುರುವಾದ ಕುರಿತು ಮಾತನಾಡಿರುವ ನಿರ್ದೇಶಕ ಆಕಾಶ್​ ಶ್ರೀವತ್ಸ, ''ಶಿವಾಜಿ ಸುರತ್ಕಲ್ 2" ಲಾಕ್​ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ನಾನು ಹಾಗೂ ರಮೇಶ್ ಸರ್ ವಾಟ್ಸಪ್ ಮೂಲಕ ಎರಡನೇ ಭಾಗದ ಕಥೆಯನ್ನು ಚರ್ಚಿಸಿದೆವು. ಎಲ್ಲರಿಗೂ ಲಾಕ್​ಡೌನ್ ನಿಂದ ತೊಂದರೆ ಆದರೆ, ನಮಗೆ ಮಾತ್ರ ಈ ಚಿತ್ರದ ಕಥೆ ಬರೆಯಲು ಅನುಕೂಲವಾಯಿತು. ನಮ್ಮ‌ ತಂಡದ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ಇದೇ ಏಪ್ರಿಲ್ 14 ರಂದು ನಮ್ಮ ಶಿವಾಜಿ ಮತ್ತೆ ಹೊಸ ಕೇಸ್ ಹೊತ್ತು ಬರಲಿದ್ದಾನೆ. ಎಲ್ಲರಲ್ಲೂ ಮನೆ ಮಾಡಿರುವ ಮಾಯಾವಿ" ಯಾರು? ಎಂಬ ಪ್ರಶ್ನೆಗೆ ಅಂದೆ ಉತ್ತರ ಸಿಗಲಿದೆ' ಎಂದು ತಿಳಿಸಿದರು.

ಕುಟುಂಬ ಸಮೇತ ಈ ಚಿತ್ರ ನೋಡಲು ಬನ್ನಿ ಎಂದು ಕರೆ ನೀಡುವ ರಮೇಶ್​ ಅರವಿಂದ್​, 'ಒಂದೊಳ್ಳೆಯ ತಂಡದ ಜತೆಗೆ ಕೆಲಸ ಮಾಡಿದ ಖುಷಿಯಿದೆ. 'ಶಿವಾಜಿ ಸುರತ್ಕಲ್ 2' ಚಿತ್ರದ ಟ್ರೇಲರ್ ಚೆನ್ನಾಗಿದೆ. ಇದೇ ಏಪ್ರಿಲ್ 14 ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಾನು ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರುತ್ತೇನೆ. ನೀವು ಕುಟುಂಬ ಸಮೇತ ನಮ್ಮ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ' ಎನ್ನುತ್ತಾರೆ.

'ಶಿವಾಜಿ ಸುರತ್ಕಲ್​ 2' ಚಿತ್ರದಲ್ಲಿ ರಾಧಿಕಾ ಚೇತನ್, ಮೇಘನಾ ಗಾಂವ್ಕರ್, ನಾಜರ್​, ವಿನಾಯಕ ಜೋಷಿ, ಸಂಗೀತಾ ಶೃಂಗೇರಿ, ರಘು ರಮಣಕೊಪ್ಪ, ವಿದ್ಯಾಮೂರ್ತಿ ಮುಂತಾದವರು ನಟಿಸಿದ್ದು, ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net