

ಹೈದರಾಬಾದ್: ಟಾಲಿವುಡ್ನಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿಯಾಡಿದ ಸೂಪರ್ ಹಿಟ್ ಸಿನಿಮಾ ಅಂದರೆ ಅದು ಶಿವ. ರಾಮ್ ಗೋಪಾಲ್ ವರ್ಮ ( Ram Gopal Varma ) ತಮ್ಮ ಮೊದಲ ಚಿತ್ರದಲ್ಲೇ ಭರ್ಜರಿ ಯಶಸ್ಸನ್ನು ಗಳಿಸಿದರು.
ಸೂಪರ್ ಸ್ಟಾರ್ ನಾಗಾರ್ಜುನ, ಅಮಲಾ ಮತ್ತು ಜೆಡಿ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು 1989, ಅಕ್ಟೋಬರ್ 5ರಂದು ಬಿಡುಗಡೆಯಾಯಿತು. ಬರೋಬ್ಬರಿ 36 ವರ್ಷಗಳ ನಂತರ, ಶಿವ ಚಿತ್ರವನ್ನು ನವೆಂಬರ್ 14 ರಂದು ಮರು ಬಿಡುಗಡೆ ಮಾಡಲಾಗುತ್ತಿದೆ.
ಈ ವಿಶೇಷ ಸಂದರ್ಭದಲ್ಲಿ ನಿರ್ದೇಶಕ ಆರ್ಜಿವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹುಡುಗಿಯೊಬ್ಬಳ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋದಲ್ಲಿರುವ ಯುವತಿ ಬೇರೆ ಯಾರೂ ಅಲ್ಲ, ಆಕೆ ಶಿವ ಚಿತ್ರದ ಬಾಲ ಕಲಾವಿದೆ.
ಅಂದಹಾಗೆ, ಶಿವ ಚಿತ್ರದ ದೃಶ್ಯವೊಂದರಲ್ಲಿ ಭವಾನಿ ಗ್ಯಾಂಗ್ ಹೀರೋ ನಾಗಾರ್ಜುನರನ್ನು ಕಾರಿನಲ್ಲಿ ಬೆನ್ನಟ್ಟುತ್ತದೆ. ಈ ವೇಳೆ ನಾಗಾರ್ಜುನ್ ಅವರು ತಮ್ಮ ಸೈಕಲ್ನ ಮುಂದೆ ಒಂದು ಪುಟ್ಟ ಬಾಲಕಿಯನ್ನು ಕೂರಿಸಿಕೊಂಡು ವೇಗವಾಗಿ ಸವಾರಿ ಮಾಡಿ, ಗೂಂಡಾಗಳಿಂದ ಎಸ್ಕೇಪ್ ಆಗಲು ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ, ಅವರಿಗೆ ಅಪಘಾತವಾಗುತ್ತದೆ ಮತ್ತು ಇಬ್ಬರೂ ಕೆಳಗೆ ಬೀಳುತ್ತಾರೆ. ಇದಾದ ನಂತರ ಹೀರೋ ನಾಗಾರ್ಜುನ್ ಮಗುವನ್ನು ಮೇಲಕ್ಕೆ ಎತ್ತಿಕೊಂಡು ಗೂಂಡಾಗಳೊಂದಿಗೆ ಫೈಟ್ ಮಾಡುತ್ತಾರೆ.
ಆ ದೃಶ್ಯದಲ್ಲಿರುವ ಮಗುವಿನ ಹೆಸರು ಸುಷ್ಮಾ. ಆಕೆ ಈಗ ಹೇಗಿದ್ದಾಳೆ? ಎಲ್ಲಿದ್ದಾಳೆ? ಎಂಬ ಮಾಹಿತಿಯನ್ನು ರಾಮ್ ಗೋಪಾಲ್ ವರ್ಮ ವಿವರಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈಗಿನ ಫೋಟೋ ಹಂಚಿಕೊಂಡಿರುವ ಆರ್ಜಿವಿ, ಸೈಕಲ್ ಚೇಸ್ ದೃಶ್ಯದಲ್ಲಿರುವ ಮಗು ಸುಷ್ಮಾ, ಪ್ರಸ್ತುತ ಅಮೆರಿಕದಲ್ಲಿ AI ಮತ್ತು ಅರಿವಿನ ವಿಜ್ಞಾನದಲ್ಲಿ ಸಂಶೋಧನೆ ಮಾಡುತ್ತಿದ್ದಾಳೆ ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಆರ್ಜಿವಿ, ಸುಷ್ಮಾ ನೀವು ತುಂಬಾ ಭಯಾನಕ ದೃಶ್ಯಗಳಲ್ಲಿ ನಟನೆ ಮಾಡಿದ್ದೀರಿ. ಆ ಸಮಯದಲ್ಲಿ, ಆ ದೃಶ್ಯ ಎಷ್ಟು ಅಪಾಯಕಾರಿ ಎಂದು ನನಗೆ ಅರ್ಥವಾಗಲಿಲ್ಲ. ನಿರ್ದೇಶಕನಾಗಿ, ನಾನು ನನ್ನ ಸ್ವಾರ್ಥಕ್ಕಾಗಿ ಮಾತ್ರ ಅಂತಹ ಅಪಾಯಕಾರಿ ದೃಶ್ಯಗಳನ್ನು ಸೆರೆಹಿಡಿದೆ. ಅದಕ್ಕಾಗಿ, "ನನ್ನನ್ನು ಕ್ಷಮಿಸಿ" ಎಂದು 36 ವರ್ಷಗಳ ನಂತರ ಯುವತಿ ಬಳಿ ಆರ್ಸಿಬಿ ಕ್ಷಮೆಯಾಚಿಸಿದ್ದಾರೆ. (ಏಜೆನ್ಸೀಸ್)