

ಬೆಂಗಳೂರು: ಇನ್ನೇನು ಶಿವರಾತ್ರಿ ಹಬ್ಬ ಬಂದೇ ಬಿಡ್ತು. ಗುಡಿ-ಗುಂಡಾರಗಳಲ್ಲಿ ಶಿವನ ಜಪತಪ ಶುರುವಾಗಲಿದೆ. ಅಷ್ಟೇ ಅಲ್ಲ ಚಿತ್ರಮಂದಿರಗಳಲ್ಲೂ ಅದು ಕೇಳಿಸಲಿದೆ! ಅರೇ.. ಅದ್ಹೇಗೆ? ಹೌದು, ಶಿವರಾತ್ರಿ ದಿನದಂದೇ ರಘು ವಿಜಯ ಕಸ್ತೂರಿ ನಿರ್ದೇಶನದ ‘ಶಿವ’ ಸಿನಿಮಾ ಬಿಡುಗಡೆ ಆಗಲಿದೆ. ಇಲ್ಲಿ ನಿರ್ದೇಶನದ ಜತೆಗೆ ನಾಯಕ, ನಿರ್ವಪಕನಾಗಿ ಎಲ್ಲ ಜವಾಬ್ದಾರಿಯನ್ನೂ ರಘು ಅವರೇ ವಹಿಸಿಕೊಂಡಿದ್ದಾರೆ.
ಕೃಷಿ ಕುಟುಂಬದಿಂದ ಬಂದಿರುವ ರಘುಗೆ ಹಲವು ಸಿನಿಮಾಗಳಲ್ಲಿ ನಟಿಸಿದ ಅನುಭವ ಇದೆ. ನಿರ್ದೇಶನದ ತರಬೇತಿಯನ್ನೂ ಪಡೆದುಕೊಂಡಿದ್ದಾರೆ. ಆ ಎಲ್ಲ ಅನುಭವವನ್ನು ‘ಶಿವ’ ಮೂಲಕ ಪ್ರೇಕ್ಷಕರ ಮುಂದಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ‘ಹಳ್ಳಿ ವಾತಾವರಣದಲ್ಲಿ ಸಿನಿಮಾ ಸಿದ್ಧವಾಗಿದೆ. ಅಲ್ಲೊಂದು ಪ್ರೇಮಕಥೆ, ಹಳ್ಳಿಯ ಕಾದಾಟ, ಲೋಕಲ್ ರಾಜಕಾರಣ ಎಲ್ಲವನ್ನೂ ಬೆರೆಸಿ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ರಘು. ಮಂಡ್ಯ ಸುತ್ತಮುತ್ತ ಶೂಟಿಂಗ್ ನಡೆದಿದೆ. ಈ ಹಿಂದೆ ‘ಹುಲಿದುರ್ಗ’ ಚಿತ್ರ ನಿರ್ದೇಶಿಸಿದ್ದ ವಿಕ್ರಮ್ ಯಶೋಧರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಒರಟು ಸ್ವಭಾವದ ಹುಡುಗನನ್ನು ಸರಿದಾರಿಗೆ ತರುವ ಶಿಕ್ಷಕಿಯ ಪಾತ್ರದಲ್ಲಿ ನಾಯಕಿ ಧರಣಿ ಅಭಿನಯಿಸಿದ್ದಾರೆ.