

ಬೆಂಗಳೂರು: ‘ಮಾಫಿಯಾ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಗ ನೋಡಿದರೆ, ಇಷ್ಟರಲ್ಲಾಗಲೇ ಚಿತ್ರ ಮುಗಿದಿರಬೇಕಿತ್ತು. ಆದರೆ, ಚಿತ್ರೀಕರಣಕ್ಕೆ ಕಾರಣಾಂತರಗಳಿಂದ ಬ್ರೇಕ್ ಬಿದ್ದು, ಎಲ್ಲವೂ ತಡವಾಯಿತು. ಈಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಜೂನ್ 15ರಿಂದ ಪ್ರಾರಂಭವಾಗಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ಶೈನ್ ಶೆಟ್ಟಿ ಸಹ ಸೇರ್ಪಡೆಯಾಗಲಿದ್ದಾರೆ.
ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್್ಸ’ ನಂತರ ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಬಿಗ್ ಬಾಸ್’ ವಿಜೇತ ಶೈನ್, ಈಗ ‘ಮಾಫಿಯಾ’ ತಂಡ ಸೇರ್ಪಡೆಯಾಗಿದ್ದಾರೆ, ಈ ಚಿತ್ರದಲ್ಲಿ ಅವರು ಪ್ರಜ್ವಲ್ನ ಸ್ನೇಹಿತನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದೊಂದು ಬಹಳ ಮುಖ್ಯವಾದ ಪಾತ್ರ ಎನ್ನುತ್ತಾರೆ ನಿರ್ದೇಶಕ ಲೋಹಿತ್.
’ಮಾಫಿಯಾ’ದ ಈ ಕೊನೆಯ ಹಂತದ ಚಿತ್ರೀಕರಣ ಒಂದು ತಿಂಗಳ ಕಾಲ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಸತತವಾಗಿ ನಡೆಯಲಿದೆಯಂತೆ. ಆ ನಂತರ ಒಂದು ಹಾಡಿಗಾಗಿ ಲಡಾಖ್ ಅಥವಾ ಗೋವಾಗೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಜ್ವಲ್ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸುತ್ತಿದ್ದು, ಮಿಕ್ಕಂತೆ ‘ಒರಟ’ ಚಿತ್ರದಲ್ಲಿ ನಾಯಕರಾಗಿದ್ದ ಪ್ರಶಾಂತ್, ಈ ಚಿತ್ರದಲ್ಲಿ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ದೇವರಾಜ್, ಸಾಧು ಕೋಕಿಲ, ವಾಸುಕಿ ವೈಭವ್, ಶೈನ್ ಶೆಟ್ಟಿ, ಪ್ರಕಾಶ್ ಬೆಳವಾಡಿ ಮುಂತಾದವರಿದ್ದಾರೆ. ಮಾಸ್ತಿ ಸಂಭಾಷಣೆ, ಡಿಫರೆಂಟ್ ಡ್ಯಾನಿ ಸಾಹಸ, ಅನೂಪ್ ಸೀಳಿನ್ ಸಂಗೀತವಿರುವ ಈ ಚಿತ್ರವನ್ನು ಬಿ. ಕುಮಾರ್ ನಿರ್ವಿುಸುತ್ತಿದ್ದಾರೆ.