

ಶೈನ್ ಶೆಟ್ಟಿ, ‘ಬಿಗ್ ಬಾಸ್ - ಸೀಸನ್ 7’ರ ವಿಜೇತರಾಗಿ ಭರ್ತಿ ಒಂದು ತಿಂಗಳಾಗಿದೆ. ಈ ಒಂದು ತಿಂಗಳಲ್ಲಿ ಅವರ ಜೀವನ ಹೇಗಿತ್ತು, ‘ಬಿಗ್ ಬಾಸ್’ ನಂತರ ಏನೆಲ್ಲಾ ಆಯ್ತು ಎಂಬ ಕುತೂಹಲದ ಹಿನ್ನೆಲೆಯಲ್ಲಿ ಅವರನ್ನು ಮಾತನಾಡಿಸಿದಾಗ ಸಿಕ್ಕ ವಿಷಯಗಳ ಸಾರಾಂಶ ಇಲ್ಲಿದೆ.
ಬೆಂಗಳೂರು: ‘ಬಿಗ್ ಬಾಸ್ - ಸೀಸನ್ 7’ರ ವಿಜೇತ ಶೈನ್ ಶೆಟ್ಟಿ ಈಗೇನು ಮಾಡುತ್ತಿರಬಹುದು ಎಂಬುದಕ್ಕೆ ಸದ್ಯದ ಉತ್ತರ ‘ಹೀರೋ’. ಹೌದು, ‘ಬಿಗ್ ಬಾಸ್ನ ವಿನ್ನರ್ ಆಗಿ ಹೊರಹೊಮ್ಮಿದ ತಿಂಗಳೊಳಗೇ ಅವರು ಮೂರು ಸಿನಿಮಾಗಳಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಎರಡು ಚಿತ್ರಗಳಿಗೆ ಹೀರೋ ಆಗಿ ಆಯ್ಕೆ ಆಗಿದ್ದಾರೆ. ‘‘ಬಿಗ್ ಬಾಸ್’ ಮನೆಯಿಂದ ಹೊರಬಂದ ಒಂದು ತಿಂಗಳಲ್ಲಿ ನನಗೆಂದೇ ಕಳೆಯಲು ಒಂದು ದಿನವೂ ಸಿಗಲಿಲ್ಲ’ ಎನ್ನುತ್ತ ಒಂದು ಮಾಸಾವಧಿಯ ಬೆಳವಣಿಗೆಗಳ ಬಗ್ಗೆ ಹೇಳಿಕೊಂಡರು ಶೈನ್. ‘ಗೆದ್ದ ದಿನದಿಂದ ಬರೀ ಫ್ರೆಂಡ್ಸ್ ಭೇಟಿ, ಅಲ್ಲಿ ಇಲ್ಲಿ ಓಡಾಟದ ಜತೆಗೆ ಕಥೆ ಕೇಳುವುದರಲ್ಲೇ ಕಾಲ ಕಳೆದುಹೋಗಿದೆ. ಹೆಚ್ಚೂಕಡಿಮೆ ಪ್ರತಿದಿನವೂ ಕಥೆ ಕೇಳುತ್ತಿದ್ದು, ಇದುವರೆಗೆ 12 ಕಥೆಗಳನ್ನು ಕೇಳಿದ್ದೇನೆ. ಆ ಪೈಕಿ ಮೂರು ಕಥೆಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ’ ಎಂದರು
ಶೈನ್. ‘ಮೂರು ಸಿನಿಮಾಗಳ ಪೈಕಿ ಒಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೇನೆ. ಉಳಿದೆರಡರಲ್ಲಿ ಹೀರೋ ಆಗಿ ಅಭಿನಯಿಸಲಿದ್ದು, ಒಂದರ ಹಿಂದೊಂದರಂತೆ ಸಿನಿಮಾ ನಿರ್ವಣವಾಗಲಿದೆ. ಮೊದಲ ಸಿನಿಮಾದ ಹೀರೋಯಿನ್ ಆಯ್ಕೆ ಸೇರಿ ಎಲ್ಲ ಪ್ರಕ್ರಿಯೆ ಮುಗಿದಿದೆ. ಇನ್ನೊಂದು ಸ್ಕ್ರಿಪ್ಟ್ ಹಂತದಲ್ಲಿದೆ’ ಎನ್ನುವ ಶೈನ್, ಯಾವ ಚಿತ್ರದ ಕುರಿತೂ ಹೆಚ್ಚಿನ ಮಾಹಿತಿ ಬಿಟ್ಟುಕೊಡುವುದಿಲ್ಲ. ಎಲ್ಲವನ್ನೂ ಚಿತ್ರತಂಡವೇ ಅಧಿಕೃತವಾಗಿ ಪ್ರಕಟಿಸಲಿದೆ ಎನ್ನುತ್ತಾರೆ. ಇನ್ನು ‘ಬಿಗ್ ಬಾಸ್’ ಸ್ಪರ್ಧೆಗೆ ಬರುವ ಮುನ್ನ ಮೊಬೈಲ್ ಕ್ಯಾಂಟೀನ್ ಮೂಲಕ ವ್ಯಾಪಾರದಲ್ಲಿ ತೊಡಗಿದ್ದ ಶೈನ್, ಗೆದ್ದ ಮೇಲೆ ಅದರೆಡೆಗಿನ ಗಮನವನ್ನೇನೂ ಕಡಿಮೆ ಮಾಡಿಲ್ಲ. ಬದಲಿಗೆ ಆ ಕಡೆಯೂ ಹೆಚ್ಚಿನ ಗಮನ ಹರಿಸಿರುವ ಅವರು ವ್ಯಾಪಾರ ವಿಸ್ತಾರಗೊಳಿಸುವ ಪ್ರಯತ್ನದಲ್ಲೂ ಇದ್ದಾರೆ. ‘ನನಗೆ ಆಧಾರವಾಗಿ ಇದ್ದಿದ್ದೇ ಫುಡ್ ಟ್ರಕ್. ಅದರ ಬಗ್ಗೆ ಈಗಲೂ ಹೆಚ್ಚಿನ ಗಮನ ಕೊಡುತ್ತಿದ್ದು, ಸಿನಿಮಾ-ವ್ಯಾಪಾರ ಎರಡನ್ನೂ ಸರಿದೂಗಿಸಿಕೊಂಡು ಜತೆಜತೆಯಲ್ಲೇ ಕೊಂಡೊಯ್ಯುವ ಯೋಜನೆ ಹಾಕಿಕೊಂಡಿದ್ದೇನೆ’ ಎನ್ನುತ್ತಾರೆ ಅವರು.
‘ಹಳೇ ಟ್ರಕ್ ಜತೆಗೆ ಹೊಸದೊಂದು ಟ್ರಕ್ ಖರೀದಿಸಿದ್ದೇನೆ. ಅದರ ಮಾಡಿಫಿಕೇಷನ್ ನಡೆಯುತ್ತಿದೆ. ಅದರ ಮೂಲಕ ಬೀದಿಬದಿಯ ವ್ಯಾಪಾರವನ್ನು ಕಾರ್ಪೆರೇಟ್ ಲೆವೆಲ್ಗೆ ಕೊಂಡೊಯ್ಯುವ ಯೋಜನೆ ಹಾಕಿಕೊಂಡಿದ್ದೇನೆ. ಸಭೆ-ಸಮಾರಂಭಗಳಿಗಷ್ಟೇ ಆಹಾರ ಪೂರೈಸುವಂತೆ ಹೊಸ ಟ್ರಕ್ ವಿನ್ಯಾಸ ಮಾಡಿಸಲಾಗುತ್ತಿದೆ. ಜತೆಗೆ ಕೇಟರಿಂಗ್ ಆರಂಭಿಸುವ ಯೋಜನೆಯೂ ಇದೆ. ಈ ಕಡೆ ಸಿನಿಮಾದಲ್ಲೂ ಬಿಜಿ ಆಗಲಿರುವ ಕಾರಣ, ವ್ಯವಹಾರ ನೋಡಿಕೊಳ್ಳಲು ಅನುಕೂಲವಾಗಲಿ ಎಂದುಕೊಂಡು ಅಬುಧಾಬಿಯಲ್ಲಿರುವ ಸೋದರನನ್ನು ಕರೆಸಿಕೊಂಡು ಪುಡ್ಟ್ರಕ್ ಜವಾಬ್ದಾರಿ ವಹಿಸಲಾಗುವುದು’ ಎನ್ನುತ್ತಾರೆ ಶೈನ್. ‘ಬಿಗ್ ಬಾಸ್’ ವಿನ್ನರ್ ಆದ ಬಳಿಕ ಫುಡ್ಟ್ರಕ್ ಬಳಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುವ ಶೈನ್, ‘ಹಲವರು ಅಲ್ಲಿಗೆ ಬಂದು ಫೋಟೋ ಕೇಳುತ್ತಾರೆ, ಪ್ರೀತಿ-ಅಭಿಮಾನ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಚಿಕ್ಕಮಕ್ಕಳು ಬಂದು ವಿಚಾರಿಸಿದಾಗ ತುಂಬ ಖುಷಿ ಆಗುತ್ತದೆ’ ಎನ್ನುತ್ತಾರೆ.
ಅನಿಲ್ ಕುಂಬ್ಳೆ ಜತೆ ಭೇಟಿ
ಶೈನ್ ‘ಬಿಗ್ ಬಾಸ್’ ಗೆದ್ದ ಬಳಿಕ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಕುಟುಂಬದಿಂದಲೂ ಭೇಟಿ ಆಗಲು ಆಹ್ವಾನ ಬಂದಿದ್ದು, ಮೆಚ್ಚುಗೆಯೂ ವ್ಯಕ್ತವಾಗಿದೆ. ‘‘ಬಿಗ್ಬಾಸ್’ ವಿನ್ನರ್ ಆದ ಮೊದಲ ವಾರದಲ್ಲೇ ಅನಿಲ್ ಕುಂಬ್ಳೆ ಅವರ ಪತ್ನಿ ಚೇತನಾ ಕುಂಬ್ಳೆ ಅವರು ಕರೆ ಮಾಡಿ ವಿಷ್ ಮಾಡಿದ್ದರು. ‘ಬಿಗ್ ಬಾಸ್’ನಲ್ಲಿನ ನನ್ನ ಪರ್ಫಾರ್ವೆನ್ಸ್ ಹಾಗೂ ನನ್ನ ಪಯಣದ ಬಗ್ಗೆ ತಿಳಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಮನೆಗೂ ಆಹ್ವಾನಿಸಿದ್ದರು. ಹೀಗಾಗಿ ಸೋಮವಾರ ಅವರ ಮನೆಗೆ ಹೋಗಿ, ಅನಿಲ್ ಕುಂಬ್ಳೆ ಹಾಗೂ ಚೇತನಾ ಇಬ್ಬರನ್ನೂ ಭೇಟಿ ಮಾಡಿ ಬಂದಿದ್ದೆ. ಅದೊಂದು ಅದ್ಭುತ ಅನುಭವ’ ಎಂದು ಬಣ್ಣಿಸುತ್ತಾರೆ ಶೈನ್.
ರವಿಕಾಂತ ಕುಂದಾಪುರ