ಬಾಡಿಗೆ ತಾಯ್ತನ ಆಯ್ಕೆ ಮಾಡಿದ್ದೇಕೆ? ಕಾಯಿಲೆಯ ಗುಟ್ಟು ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ...

Shilpa Shetty 12 May
Published on

ಬಾಲಿವುಡ್​ನ ಸ್ಟಾರ್ ನಟಿ, ಫಿಟ್​ನೆಸ್ ಐಕಾನ್ ಶಿಲ್ಪಾ ಶೆಟ್ಟಿ ಇದೇ ವರ್ಷ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದುಕೊಂಡಿದ್ದರು. ಆ ಮಗು ಪಡೆದ ಬಗ್ಗೆ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಬಹಿರಂಗವಾಗಿ ಹೇಳಿಕೊಂಡು, ಬಳಿಕ ಆ ಮಗುವಿಗೆ ಸಮೀಶಾ ಎಂದು ನಾಮಕರಣವನ್ನೂ ಮಾಡಿದ್ದರು.

ಇಷ್ಟೆಲ್ಲ ನಡೆಯುತ್ತಿದ್ದಂತೆ, ‘ಶಿಲ್ಪಾ ಶೆಟ್ಟಿ ಈಗಾಗಲೇ ಒಂದು ಮಗುವಿನ ತಾಯಿ. ಇನ್ನೊಂದು ಮಗುವಿಗೂ ಅವರೇ ಜನ್ಮ ನೀಡಬಹುದಿತ್ತು. ಬಾಡಿಗೆ ತಾಯ್ತನದ ಅವಶ್ಯಕತೆ ಏನಿತ್ತು?’ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಆಗ ಅದ್ಯಾವುದಕ್ಕೂ ಉತ್ತರಿಸದ ಶಿಲ್ಪಾ, ಮೌನವಾಗಿಯೇ ಮುದ್ದು ಮಗಳನ್ನು ಮನೆಗೆ ಬರಮಾಡಿಕೊಳ್ಳುವ ಖುಷಿಯಲ್ಲಿದ್ದರು. ಹಾಗೆ ಹರಿದಾಡಿದ ಮಾತುಗಳಿಗೆ ಅವರು ಇದೀಗ ಪ್ರತಿಕ್ರಿಯಿಸಿದ್ದಾರೆ. ಬಾಡಿಗೆ ತಾಯ್ತನ ಆಯ್ದುಕೊಂಡಿದ್ದರ ಹಿಂದಿನ ಒಳ ಮರ್ಮವನ್ನು ಹೇಳಿಕೊಂಡಿದ್ದಾರೆ.

ಹೌದು, ಶಿಲ್ಪಾ ಶೆಟ್ಟಿ 2009ರ ನವೆಂಬರ್ 22ರಂದು ಉದ್ಯಮಿ ರಾಜ್ ಕುಂದ್ರಾ ಅವರನ್ನು ವರಿಸಿದ್ದರು. ಅದಾದ ಬಳಿಕ 2012ರಲ್ಲಿ ಈ ದಂಪತಿಗೆ ಮುದ್ದಾದ ಗಂಡು ಮಗುವಾಗಿತ್ತು. ಇನ್ನೊಂದು ಮಗು ಪಡೆದುಕೊಳ್ಳಬೇಕೆಂಬ ಹಂಬಲ ಇವರಿಗಿತ್ತಾದರೂ, ಅದಕ್ಕೆ ಶಿಲ್ಪಾ ಶೆಟ್ಟಿ ದೇಹ ಮಾತ್ರ ಸ್ಪಂದಿಸುತ್ತಿರಲಿಲ್ಲ. ಆ ಕಾರಣಕ್ಕಾಗಿಯೇ ಬಾಡಿಗೆ ತಾಯ್ತನದ ಮೊರೆ ಹೋಗಿ ಮಗುವನ್ನು ಪಡೆದುಕೊಂಡರು.

‘ವಿಯಾನ್ ಹುಟ್ಟಿ ಕೆಲ ವರ್ಷಗಳ ಬಳಿಕ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದೆವು. ಆ ನಮ್ಮ ಖುಷಿಗೆ ಕಾಯಿಲೆಯೊಂದು ಅಡ್ಡಿಯಾಯಿತು. ಅಟೊ ಇಮ್ಯೂನೋ ಡಿಸೀಸ್ (ಎಪಿಎಲ್​ಎ)ನಿಂದಾಗಿ ಹಲವು ಬಾರಿ ಗರ್ಭಪಾತವಾಯಿತು. ಹಾಗಾಗಿ ಬಾಡಿಗೆ ತಾಯ್ತನ ಆಯ್ದುಕೊಂಡೆ. ನಾನೇ ಇನ್ನೊಂದು ಮಗುವಿಗೆ ಜನ್ಮ ನೀಡಬೇಕೆಂದು ಬರೋಬ್ಬರಿ ನಾಲ್ಕು ವರ್ಷ ಕಾದೆನಾದರೂ ಅದು ಈಡೇರಲಿಲ್ಲ. ದತ್ತು ಮಗು ಪಡೆಯುವ ಆಸೆ ಇತ್ತಾದರೂ, ಅದೂ ಸರಿ ಅನಿಸಲಿಲ್ಲ’ ಎಂದು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ ಶಿಲ್ಪಾ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net