₹ 21 ಲಕ್ಷ ವಂಚನೆ ಪ್ರಕರಣ: ಸೆಷನ್ಸ್ ನ್ಯಾಯಾಲಯದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ

Published on
ಮುಂಬೈ: ಬಾಲಿವುಡ್​ನ ಫಿಟ್ ಮತ್ತು ಸೂಪರ್ ಗ್ಲಾಮರ್ಸ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಇನ್ನೂ ಸಂಕಷ್ಟಗಳು ಮುಗಿದಿಲ್ಲ ಎಂಬಂತೆ ಕಾಣುತ್ತಿದೆ. ಹೌದು, ಇತ್ತೀಚೆಗೆ ಹೊಸದೊಂದು ವಂಚನೆ ಪ್ರಕರಣದಲ್ಲಿ ಶಿಲ್ಪಾ ಅವರ ಕುಟುಂಬದ ಹೆಸರು ಕೇಳಿಬಂದಿತ್ತು. ಆಟೋಮೊಬೈಲ್ ಡೀಲರ್ ಓರ್ವರು ಶೆಟ್ಟಿ ಅವರ ಕುಟುಂಬವು ಪಡೆದಿದ್ದ 21 ಲಕ್ಷ ರೂ. ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಸಹೋದರಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ ಅವರ ಹೆಸರು ಕೇಳಿಬಂದಿದ್ದು, ಈ ಮೂವರ ಅವರ ವಿರುದ್ಧ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಂಚನೆ ಪ್ರಕರಣದ ತನಿಖೆಗೆ ಆದೇಶಿಸಿತ್ತು.
ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶಿಲ್ಪಾ ಶೆಟ್ಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಿಂಡೋಶಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಟಿಯ ದೂರನ್ನು ಪರಿಗಣಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಝಡ್.ಖಾನ್ ಅವರು ಡೀಲರ್ ಪರ್ಷದ್ ಫಿರೋಜ್ ಅಮ್ರಾ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ಮುಂದಿನ ವಿಚಾರಣೆಯನ್ನು ಮಾರ್ಚ್ 14 ಕ್ಕೆ ಮುಂದೂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು, ಸೆಷನ್ಸ್ ನ್ಯಾಯಾಲಯದಲ್ಲಿ ಶಿಲ್ಪಾ ತಮ್ಮ ಸಾರ್ವಜನಿಕ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.
ಇನ್ನು, ಶಿಲ್ಪಾ, ಶಮಿತಾ ಅವರಿಂದ ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಇಂತಹ ಮೊಕದ್ದಮೆಗಳನ್ನು ಹಾಕಲಾಗಿದೆ ಎಂದು ಮನವಿ ಸಲ್ಲಿಸಿದ್ದಾರೆ. ದೂರುದಾರರು ದಾಖಲಿಸಿರುವ ದೂರು ಕಾಲ್ಪನಿಕವಾಗಿದ್ದು, ಯಾವುದೇ ಸಾಕ್ಷ್ಯಗಳನ್ನು ಹೊಂದಿಲ್ಲ ಎಂದೂ ಸಹ ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. ಅಂದಹಾಗೆ, ಆಟೋಮೊಬೈಲ್ ಸಂಸ್ಥೆಯೊಂದರ ಮಾಲೀಕರಾದ ಫಿರೋಜ್ ಆಮ್ರಾ ಅವರು ''ಶಿಲ್ಪಾ ಅವರ ತಂದೆ ದಿವಂಗತ ಸುರೇಂದ್ರ ಶೆಟ್ಟಿ 21 ಲಕ್ಷ ರೂ ಸಾಲವನ್ನು ಪಡೆದಿದ್ದರು. ಅದನ್ನು 2017 ರ ಜನವರಿಯಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕಾಗಿತ್ತು. ಆದರೆ, ಸಾಲವನ್ನು ಮರುಪಾವತಿಸಲು ಶಿಲ್ಪಾ, ಶಮಿತಾ ಮತ್ತು ಸುನಂದಾ ವಿಫಲರಾಗಿದ್ದಾರೆ'' ಎಂದು ಮೊದಲು ದೂರು ದಾಖಲಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net