

Shefali Jariwala : ದಿವಂಗತ ಪುನೀತ್ ರಾಜ್ಕುಮಾರ್ ನಟನೆಯ ಸೂಪರ್ ಹಿಟ್ "ಹುಡುಗರು" ಸಿನಿಮಾದಲ್ಲಿ "ತೊಂದ್ರೆ ಇಲ್ಲ ಪಂಕಜಾ" ಎಂಬ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ಬ್ಯೂಟಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಶುಕ್ರವಾರ (ಜೂನ್ 27) ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಆದರೆ, ಶೆಫಾಲಿ ಅವರ ಅಕಾಲಿಕ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರಂಭದಲ್ಲಿ ಶೆಫಾಲಿ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂಬ ವರದಿಗಳಿದ್ದವು. ಆದರೆ, ಕುಟುಂಬ ಸದಸ್ಯರು ಇದನ್ನು ದೃಢಪಡಿಸಿಲ್ಲ. ಅಲ್ಲದೆ, ಈ ಬಗ್ಗೆ ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮುಂಬೈ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಶೆಫಾಲಿ ಅವರು ತಂಗಿದ್ದ ಅಪಾರ್ಟ್ಮೆಂಟ್ನಲ್ಲಿ ವಿಧಿವಿಜ್ಞಾನ ತಜ್ಞರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪೊಲೀಸರು ಅಡುಗೆಯವರು ಮತ್ತು ಮನೆಯಲ್ಲಿ ಕೆಲಸ ಮಾಡುವವರನ್ನು ಪ್ರಶ್ನಿಸುತ್ತಿದ್ದಾರೆ. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾವು ಅಂಧೇರಿಯಲ್ಲಿರುವ ಶೆಫಾಲಿ ಅವರ ನಿವಾಸದಲ್ಲಿ ಆಕೆಯ ಶವವನ್ನು ಪರೀಕ್ಷಿಸಿದ್ದೇವೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕುಮಾರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಆಕೆಯ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯೇ ಶೆಫಾಲಿ ಜರಿವಾಲಾ ತೀವ್ರ ಅಸ್ವಸ್ಥರಾದರು. ಅವರ ಪತಿ ಪರಾಗ್, ತಕ್ಷಣ ಅವರನ್ನು ಅಂಧೇರಿಯ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಸದ್ಯಕ್ಕೆ ಹೃದಯಾಘಾತದಿಂದ ಶೆಫಾಲಿ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಕುಟುಂಬಸ್ಥರಿಗೆ ಹೃದಯಾಘಾತವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಪೊಲೀಸರು ಈ ಪ್ರಕರಣದ ಮೇಲೆ ಸಣ್ಣದೊಂದು ಅನುಮಾನ ಮೂಡಿದ್ದು ಸಾವಿಗೆ ನಿಖರ ಕಾರಣ ಏನೆಂದು ತಿಳಿದುಕೊಳ್ಳಲು ತನಿಖೆ ಆರಂಭಿಸಿದ್ದಾರೆ.
ಅಂದಹಾಗೆ, ಶೆಫಾಲಿ ಜರಿವಾಲಾ ಅವರು 2002ರಲ್ಲಿ "ಕಾಂತ ಲಗಾ ಗರ್ಲ್" ಎಂಬ ರೀಮಿಕ್ಸ್ ಹಾಡಿನ ಮೂಲಕ ಪ್ರಸಿದ್ಧರಾದರು. ಅಂದಿನಿಂದ ಎಲ್ಲರೂ ಆಕೆಯನ್ನು "ಕಾಂತ ಲಗಾ ಗರ್ಲ್" ಅಂತಾನೇ ಕರೆಯುತ್ತಿದ್ದರು. 2015ರಲ್ಲಿ ನಟ ಪರಾಗ್ ತ್ಯಾಗಿ ಅವರನ್ನು ವಿವಾಹವಾದರು. ಶೆಫಾಲಿ ಅವರಿಗೆ ಇದು ಎರಡನೇ ಮದುವೆ. ಇದಕ್ಕೂ ಮೊದಲು ಹರ್ಮೀತ್ ಸಿಂಗ್ ಎಂಬುವರನ್ನು 2004ರಲ್ಲಿ ಮದುವೆ ಆಗಿದ್ದರು. ಆದರೆ,; ವೈಯಕ್ತಿಕ ಕಾರಣಗಳಿಂದ 2009ರಲ್ಲಿ ಡಿವೋರ್ಸ್ ಪಡೆದುಕೊಂಡಿದ್ದರು.