ಶ್ರೀನಗರ ಕಿಟ್ಟಿ ಈಗ ಗೌಳಿ; ಒಂದು ಸಣ್ಣ ಗ್ಯಾಪ್​ನ ನಂತರ...

Gowli
Published on

ಬೆಂಗಳೂರು: ಎಲ್ಲಿ ಶ್ರೀನಗರ ಕಿಟ್ಟಿ ಪೋಷಕ ಪಾತ್ರಗಳಿಗೆ ಖಾಯಂ ಆಗಿ ಬಿಡುತ್ತಾರೋ ಎಂಬ ಭಯ ಅವರ ಅಭಿಮಾನಿಗಳನ್ನು ಕಾಡದಿರಲಿಲ್ಲ. ಅದಕ್ಕೆ ಕಾರಣ, ‘ಗರುಡ’, ‘ಅವತಾರ್ ಪುರುಷ’, ‘ವೀರಂ’ ... ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ಕಿಟ್ಟಿ ಪೋಷಕ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದರು. ಈಗ ಒಂದು ಗ್ಯಾಪ್​ನ ನಂತರ ಕಿಟ್ಟಿ ಪುನಃ ಹೀರೋ ಆಗುತ್ತಿದ್ದಾರೆ, ‘ಗೌಳಿ’ ಎಂಬ ಚಿತ್ರದಲ್ಲಿ.

‘ಗೌಳಿ’ ಎಂದರೇನು? ಕಥೆ ಏನು? ಮುಂತಾದ ಯಾವ ವಿಷಯಗಳನ್ನೂ ಚಿತ್ರತಂಡದವರು ಸದ್ಯಕ್ಕೆ ಬಿಟ್ಟುಕೊಡುವುದಿಲ್ಲ. ಶುಕ್ರವಾರ ಚಿತ್ರದ ಮೊದಲ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಕಿಟ್ಟಿ ಸಖತ್ ರಫ್ ಆಂಡ್ ಟಫ್ ಆಗಿ ಕಾಣಿಸಿಕೊಂಡಿದ್ದಾರೆ.

ಹಲವು ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವವಿರುವ ಸೂರ ಎನ್ನುವವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘು ಸಿಂಗಂ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದಾರೆ.

ಚಿತ್ರದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ರಘು, ‘ಈ ಫೋಟೋ ಸುಮ್ಮನೆ ತೆಗೆಸಿದ್ದಲ್ಲ. ಚಿತ್ರದ ಮಹತ್ವದ ಸನ್ನಿವೇಶಕ್ಕೆ ಈ ಫೋಟೋ ಸಂಬಂಧಿಸಿದೆ ಮತ್ತು ನಿಜವಾದ ಲೊಕೇಶನ್​ನಲ್ಲೇ ಈ ಫೋಟೋಶೂಟ್ ಮಾಡಲಾಗಿದೆ. ಸದ್ಯಕ್ಕೆ ಕಥೆ-ಚಿತ್ರಕಥೆ ಸಿದ್ಧವಾಗಿದೆ. ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net