

ಬೆಂಗಳೂರು: ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ, ಗುರುವಾರವಷ್ಟೇ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕರೊನಾ ಪಾಸಿಟಿವ್ ಇದೆ ಮತ್ತು ತಾವೆಲ್ಲಾ ಕ್ವಾರಂಟೈನ್ನಲ್ಲಿ ಇರುವುದಾಗಿ ಸೋಷಿಯಲ್ ಮೀಡಿಯಾ ಹೇಳಿಕೊಂಡಿದ್ದರು.
ಈಗ ಶರ್ಮಿಳಾ ಮಾಂಡ್ರೆ, ಅನವಶ್ಯಕವಾಗಿ ತಮ್ಮ ವಿರುದ್ಧ ಸುಳ್ಳುಸುದ್ದಿಗಳನ್ನು ಹರಡಿದರೆ, ತಾವು ಸಮ್ಮನಿರುವುದಿಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾದ ಸಂದರ್ಭದಲ್ಲಿ, ಅವರ ಜತೆಗೆ ಡ್ರಗ್ ಪೆಡ್ಲರ್ ಒಬ್ಬ ಇದ್ದ ಎಂಬ ಗುಸುಗುಸು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಶರ್ಮಿಳಾ ಮಾಂಡ್ರೆ ಅವರ ಆಪ್ತ ಎನ್ನಲಾದ ಕಾರ್ತಿಕ್ ಎನ್ನುವವರನ್ನು ಗುರುವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶರ್ಮಿಳಾ ವಿಷಯದಲ್ಲಿ ಹಲವು ಊಹಾಪೋಹಗಳು ಕೇಳಿ ಬರುತ್ತಿವೆ.
ಹಾಗೆ ತಮ್ಮ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಶರ್ಮಿಳಾ ಮಾಂಡ್ರೆ, ತಮ್ಮ ಮೌನವನ್ನು ದೌರ್ಬಲ್ಯ ಎಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶರ್ಮಿಳಾ, 'ನನ್ನ ಮೌನ ಎಲ್ಲರನ್ನೂ ಏನೇನೋ ಕಲ್ಪಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತಿದೆ ಎಂದರೆ, ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ. ನನ್ನ ಮೇಲೆ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ' ಎಂದು ಅವರು ಎಚ್ಚರಿಸಿದ್ದಾರೆ.