‘ಡೆವಿಲ್’ ಶರ್ಮಿಳಾ: 17 ವರ್ಷಗಳ ಬಳಿಕ ದರ್ಶನ್​ ಜತೆಗೂಡಿದ ನವಗ್ರಹ ನಟಿ

sharmila 1
Published on

ಬೆಂಗಳೂರು: ನಟ ದರ್ಶನ್ ಅಭಿನಯಿಸುತ್ತಿರುವ ‘ದ ಡೆವಿಲ್’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ಮೈಸೂರು ಹಾಗೂ ರಾಜಸ್ಥಾನದಲ್ಲಿ ಶೂಟಿಂಗ್ ಮಾಡಿರುವ ಚಿತ್ರತಂಡ ಇದೀಗ ವಿದೇಶಕ್ಕೆ ಹಾರಲು ಸಿದ್ಧವಾಗುತ್ತಿದೆ. ಈ ಮಧ್ಯೆ ನಟಿ ಶರ್ಮಿಳಾ ಮಾಂಡ್ರೆ ‘ದ ಡೆವಿಲ್’ ತಂಡವನ್ನು ಸೇರುವ ಮೂಲಕ ಅಚ್ಚರಿ ಮೂಡಿಸಿದ್ದರು. ‘ನವಗ್ರಹ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದರ್ಶನ್ ಹಾಗೂ ಶರ್ಮಿಳಾ ಇದೀಗ 17 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಇದೇ ಖುಷಿಯಲ್ಲಿರುವ ನಟಿ ಶರ್ಮಿಳಾ ‘ದ ಡೆವಿಲ್’ ಪಾತ್ರ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ ‘ವಿಜಯವಾಣಿ’ ಜತೆ ಹಂಚಿಕೊಂಡರು. ‘‘ಮೊದಲಿನಿಂದಲೂ ‘ಮಿಲನ’ ಪ್ರಕಾಶ್ ಸರ್ ಜತೆ ಕೆಲಸ ಮಾಡಬೇಕು ಎಂಬ ಕನಸಿತ್ತು. ಅವರ ನಿರ್ದೇಶನದ ಎಲ್ಲ ಸಿನಿಮಾಗಳನ್ನು ನೋಡಿ, ಮೆಚ್ಚಿಕೊಂಡಿದ್ದೇನೆ. ಹೀಗಿರುವಾಗ ಅವರೇ ‘ದ ಡೆವಿಲ್’ ಸಿನಿಮಾ ಪಾತ್ರದ ಬಗ್ಗೆ ಹೇಳಿದಾಗ ತಕ್ಷಣವೇ ಒಪ್ಪಿಕೊಂಡೆ. ನನಗೆ ಇದೊಂದು ದೊಡ್ಡ ಅವಕಾಶ ಎಂದೇ ಭಾವಿಸುವೆ. ‘ಡ ಡೆವಿಲ್’ನಲ್ಲಿ ನನ್ನದು ಸರ್‌ಪ್ರೈಸ್ ಪಾತ್ರ. ಸದ್ಯಕ್ಕೆ ರಿವೀಲ್ ಮಾಡುವಂತಿಲ್ಲ. ಆದರೆ, ಈಗ ಕೆಲವೆಡೆ ನನ್ನ ಪಾತ್ರದ ಬಗ್ಗೆ ಬೇರೆ ಬೇರೆ ರೀತಿಯಲ್ಲಿ ಸುದ್ದಿಯಾಗುತ್ತಿದೆ. ಅದೆಲ್ಲವೂ ಸುಳ್ಳು. ಪಾತ್ರದ ಆ ಸರ್‌ಪ್ರೈಸ್ ಹಾಗೆಯೇ ಇರಲಿ. ಈಗಾಗಲೇ ನನ್ನ ಭಾಗದ ಶೂಟಿಂಗ್ ಪೂರ್ಣಗೊಳಿಸಿದ್ದೇನೆ. ಡಬ್ಬಿಂಗ್ ಅಷ್ಟೇ ಬಾಕಿಯಿದೆ. ತುಂಬಾ ದಿನಗಳ ಬಳಿಕ ದರ್ಶನ್ ಸರ್ ಜತೆ ಕೆಲಸ ಮಾಡಿದ ಖುಷಿ ಇದೆ. ‘ನವಗ್ರಹ’ ಸಮಯದಲ್ಲಿದ್ದ ಇದ್ದ ಬಾಂಧವ್ಯ ಹಾಗೆಯೇ ಮುಂದುವರಿದಿದೆ. ಈ ಚಿತ್ರಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದು ಮಾಹಿತಿ ಹಂಚಿಕೊಂಡರು.

ನಿರ್ಮಾಪಕಿಯಾದ ನಟಿ: ನಟಿಯಾಗಿ ಮಿಂಚಿರುವ ಶರ್ಮಿಳಾ ಮಾಂಡ್ರೆ ಒಂದು ಹೆಜ್ಜೆ ಮುಂದೆ ಇಡಲು ಬಯಸಿದ್ದಾರೆ. ಅರ್ಥಾತ್, ಇದೀಗ ಅವರು ನಿರ್ಮಾಪಕಿಯಾಗುವ ಆಲೋಚನೆಯಲ್ಲಿದ್ದಾರೆ. ‘ನಾನು ನಟಿಯಾಗಿ ಈಗಾಗಲೇ ಗುರುತಿಸಿಕೊಂಡಿದ್ದೇನೆ. ನನಗೂ ಭಡ್ತಿ ಬೇಕು ಅನಿಸುತ್ತಿದೆ. ಹಾಗಾಗಿ, ನಿರ್ಮಾಪಕಿಯಾಗುವ ಆಲೋಚನೆಯಲ್ಲಿದ್ದೇನೆ. ಈ ವಿಷಯ ಚಾಲ್ತಿಯಲ್ಲಿದ್ದು, ಶೀಘ್ರದಲ್ಲೇ ಅನೌನ್ಸ್ ಮಾಡುವೆ.ಉತ್ತಮ ಕಂಟೆಂಟ್‌ವುಳ್ಳ ಸ್ಕ್ರಿಪ್ಟ್‌ಗಳಿಗೆ ಅವಕಾಶ ನೀಡಬೇಕು ಎನ್ನುವುದೇ ನನ್ನ ಉದ್ದೇಶ. ಈ ನಡುವೆ, ಕನ್ನಡದ ಇನ್ನೊಂದು ಸಿನಿಮಾಗೆ ಸಹಿ ಹಾಕಿದ್ದೇನೆ. ಅದು ಕೂಡ ಶೀಘ್ರದಲ್ಲೇ ಅನೌನ್ಸ್ ಆಗಲಿದೆ’ ಎಂದು ಮಾಹಿತಿ ನೀಡಿದರು.

ದೀಪಿಕಾಗೆ ಶರ್ಮಿಳಾ ಬೆಂಬಲ: ಕೇವಲ ಆರು ಗಂಟೆ ಮಾತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂಬ ಷರತ್ತು ವಿಧಿಸಿದ್ದರಿಂದಾಗಿ ದೀಪಿಕಾ ಪಡುಕೋಣೆ ಅವರನ್ನು ‘ಸ್ಪಿರಿಟ್’ನಿಂದ ಕೈಬಿಡಲಾಗಿತ್ತು. ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿಯೊಬ್ಬರು ಷರತ್ತು ವಿಧಿಸುವುದರಲ್ಲಿ ತಪ್ಪೇನಿಲ್ಲ ಎನ್ನುವ ಶರ್ಮಿಳಾ, ‘ದೀಪಿಕಾ ಅವರಿಗೆ ಅವರದ್ದೇ ಆದ ಕುಟುಂಬವಿದೆ. ಮಗುವಿನ ಹಾರೈಕೆ ಮಾಡಬೇಕಿದೆ. ಹಾಗಾಗಿ, ಕೆಲವು ನಿಯಮ ಸಡಲಿಕೆ ಮಾಡುವಂತೆ ಕೇಳಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಕಲಾವಿದರು ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯದಿಂದ ಇರಬೇಕಾದರೆ, ನಾವು ಕೂಡ ಇಂತಿಷ್ಟೇ ಅವಧಿ ಕೆಲಸ ಮಾಡಬೇಕು ಎಂಬುದು ನಿಯಮವಾಗಬೇಕಿದೆ’ ಎಂದು ಆಗ್ರಹಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net