

ಬೆಂಗಳೂರು: ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದು ಬಳಿಕ ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ನಟಿಯರ ಪೈಕಿ ಶರಣ್ಯಾ ಶೆಟ್ಟಿ ಓರ್ವರು. ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು, ವಿಶೇಷವಾಗಿ ‘ಕೃಷ್ಣಂ ಪ್ರಣಯ ಸಖಿ’ಯಲ್ಲಿ ಗಣೇಶ್‌ಗೆ ಜೋಡಿಯಾಗಿದ್ದ ಶರಣ್ಯಾ, ಇದೀಗ ಅವರ ಮುಂದಿನ ಸಿನಿಮಾದಲ್ಲಿ ಮತ್ತೊಬ್ಬ ಖ್ಯಾತ ನಟನಿಗೆ ನಾಯಕಿಯಾಗುತ್ತಿದ್ದಾರೆ. ಹೌದು, ನಟ ‘ನೆನಪಿರಲಿ’ ಪ್ರೇಮ್‌ಗೆ ಶರಣ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಈಗಾಗಲೇ ಲುಕ್‌ಟೆಸ್ಟ್ ನಡೆಸಲಾಗಿದ್ದು, ಚಿತ್ರಕ್ಕಾಗಿ ಹಲವು ಸಿದ್ಧತೆ ಕೂಡ ನಡೆಸುತ್ತಿದ್ದಾರಂತೆ. ಇದೇ ಖುಷಿಯಲ್ಲಿ ನಟಿ ಶರಣ್ಯಾ ಪಾತ್ರದ ಬಗ್ಗೆ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಪ್ರೇಮ್ ಸರ್ ಮುಂದಿನ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೇನೆ. ಇದೊಂದು ಮಾಸ್-ಆ್ಯಕ್ಷನ್ ಸಿನಿಮಾವಾಗಿದ್ದು, ಇಲ್ಲಿ ಅವರು ಇನ್ನಷ್ಟು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು, ದೇಹವನ್ನು ಹುರಿಗೊಳಿಸುತ್ತಿದ್ದು, ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಇಲ್ಲಿ ನನ್ನದು ಸೈಲೆನ್ಸ್ ಪಾತ್ರ. ಸಂಭಾಷಣೆ ಕಡಿಮೆಯಿದ್ದರೂ, ಎಮೋಷನ್ಸ್‌ಗಳಿಗೆ ಹೆಚ್ಚು ಆದ್ಯತೆ ನೀಡಬೇಕಿದೆ. ಕಣ್ಣಿನಲ್ಲಿಯೇ ಮಾತನಾಡುವ ಪಾತ್ರ ಇದು. ಈಗಾಗಲೇ ಲುಕ್ ಟೆಸ್ಟ್ ನಡೆಸಲಾಗಿದ್ದು, ಚಿತ್ರತಂಡವು ಆ್ಯಕ್ಟಿಂಗ್ ಕೋಚ್ ನೀಡಿದ್ದಾರೆ. ಅವರಿಂದ ಹೆಚ್ಚು ಕಲಿಯುತ್ತಿದ್ದೇನೆ. ಈ ಚಿತ್ರಕ್ಕಾಗಿ ನಾನು ಬೆಂಗಾಲಿ ಭಾಷೆ ಕಲಿಯಬೇಕಿದೆ’ ಎಂದು ಮಾಹಿತಿ ನೀಡುತ್ತಾರೆ.
ಖುಷಿಯಿದೆ: ಗಣೇಶ್ ಬಳಿಕ ಪ್ರೇಮ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಶರಣ್ಯಾ, ‘ಪ್ರೇಮ್ ಸರ್ ಜತೆ ನಟಿಸುತ್ತಿರುವುದಕ್ಕೆ ಖುಷಿಯಿದೆ. ಕನ್ನಡದ ಹುಡುಗಿ ಎಂದು ಅವಕಾಶ ನೀಡಿದ್ದಾರೆ. ಮೊದಲ ಭೇಟಿಯಲ್ಲಿ ತಾವು ಸೀನಿಯರ್ ಎಂಬುದನ್ನು ಮರೆತು ನಮ್ಮೊಂದಿಗೆ ಬೆರೆತು ಹಲವು ಸಲಹೆ ನೀಡಿದ್ದಾರೆ. ಸೆಟ್‌ನಲ್ಲಿ ಕೂಡ ನಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ’ ಎಂದು ಒಡನಾಟದ ಬಗ್ಗೆ ಹೇಳಿಕೊಂಡರು.
ಕನ್ನಡಕ್ಕೆ ಆದ್ಯತೆ: ಶರಣ್ಯಾ ಶೆಟ್ಟಿ ಕನ್ನಡದ ಬಳಿಕ ಟಾಲಿವುಡ್‌ಗೂ ಪಾದರ್ಪಣೆ ಮಾಡಿದ್ದಾರೆ. ತೆಲುಗಿನ ಹೊಸ ಸಿನಿಮಾದಲ್ಲಿ ಡಿ-ಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಇನ್ನು ಹೆಸರಿಡದ ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದು ಒಳ್ಳೆಯ ಅವಕಾಶವಾಗಿದ್ದು, ಪ್ರತಿಭೆಗೆ ವೇದಿಕೆಯಷ್ಟೇ. ಅಂಗಂಥ, ನಾನು ಕನ್ನಡ ಸಿನಿಮಾಗಳಿಂದ ವಿಮುಖವಾಗುತ್ತಿಲ್ಲ. ಕನ್ನಡದಲ್ಲಿ 10 ಸಿನಿಮಾ ಮಾಡಿದರೆ, ಬೇರೆ ಭಾಷೆಯಲ್ಲಿ ಒಂದು ಚಿತ್ರ ಮಾಡುವೆ ಅಷ್ಟೇ. ಕನ್ನಡಕ್ಕೆ ಮೊದಲ ಆದ್ಯತೆ. ಕೇವಲ ಒಂದೆರಡು ಸಿನಿಮಾ ಮಾಡಲು ಬಂದಿಲ್ಲ, ಚಿತ್ರರಂಗದಲ್ಲಿ ಉಳಿಯಲು ಬಂದಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ.