

ಬೆಂಗಳೂರು: ಕಳೆದ ವಾರವಷ್ಟೇ ಹೊಟ್ಟೆನೋವಿನಿಂದ ಒಂದು ದಿನದ ಮಟ್ಟಿಗೆ ಆಸ್ಪತ್ರೆಗೆ ದಾಖಲಾಗಿದ್ದ ನಟ ಶರಣ್ ಈಗ ಸ್ವಲ್ಪ ಚೇತರಿಸಿಕೊಳ್ಳುವುದರ ಜತೆಗೆ, ಒಂದು ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸುತ್ತಿರುವುದಷ್ಟೇ, ಚಿತ್ರವನ್ನು ನಿರ್ಮಾಣ ಸಹ ಮಾಡುತ್ತಿದ್ದಾರೆ.
ಇದನ್ನೂ ಓದಿ: VIDEO| ಅಕ್ಷಯ್ ಕುಮಾರ್ ‘ಲಕ್ಷ್ಮೀ ಬಾಂಬ್’ ಟ್ರೇಲರ್ ನೋಡಿಲ್ಲ ಅಂದರೆ, ಇಲ್ಲಿದೆ ನೋಡಿ…
ಗುರುವಾರವೇ ಶರಣ್ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು. ಅದರಲ್ಲಿ ಅವರು ಇಂದು ಒಂದು ಸರ್ಪ್ರೈಸ್ ಕೊಡುವುದಾಗಿ ಹೇಳಿದ್ದರು. ಅದರಂತೆ ಇಂದು ಬೆಳಿಗ್ಗೆ 9 ಗಂಟೆಗೆ ಸೋಷಿಯಲ್ ಮೀಡಿಯಾದಲ್ಲಿ ಶರಣ್ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಇದು ಅವರು ನಟಿಸುತ್ತಿರುವ ಹೊಸ ಚಿತ್ರ. ಸದ್ಯಕ್ಕೆ ಹೆಸರಿಟ್ಟಿಲ್ಲ. ಇದನ್ನು ಅವರು ತಮ್ಮ ಲಡ್ಡು ಸಿನಿಮಾ ಹೌಸ್ನಡಿ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಜಡೇಶ್ ಹಂಪಿ ನಿರ್ದೇಶನ ಮಾಡಿದರೆ, ತರುಣ್ ಕಿಶೋರ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದ ನಿರ್ಮಾಣದಲ್ಲೂ ಅವರು ಕೈಜೋಡಿಸಿದ್ದಾರೆ.
ಅಂದ ಹಾಗೆ, ಈ ಚಿತ್ರದ ಹೆಸರೇನು? ಕಥೆಯೇನು ಎಂಬ ಬಗ್ಗೆ ಶರಣ್ ಆಗಲೀ, ತರುಣ್ ಸುಧೀರ್ ಆಗಲೀ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇಂದು ತರುಣ್ ಅವರ ಹುಟ್ಟುಹಬ್ಬವಾದ್ದರಿಂದ, ಚಿತ್ರವನ್ನು ಘೋಷಿಸಲಾಗಿದೆ. ಸದ್ಯ, 'ಅವತಾರ ಪುರುಷ' ಚಿತ್ರದಲ್ಲಿ ಶರಣ್ ನಟಿಸುತ್ತಿದ್ದು, ಆ ಚಿತ್ರ ಸಂಪೂರ್ಣವಾದ ನಂತರ, ಈ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.