ಮಲಯಾಳಂ ಚಿತ್ರದಲ್ಲಿ ರಾಜಸ್ಥಾನಿ ಶಾನ್ವಿ; ನಿವಿನ್ ಪೌಲಿ ಚಿತ್ರಕ್ಕೆ ನಾಯಕಿ

Shanvi
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ಶಾನ್ವಿ ಶ್ರೀವಾತ್ಸವ ಮೂಲತಃ ಉತ್ತರ ಭಾರತದವರು. ಕಳದೊಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿಯೇ ಹೆಚ್ಚು ಸಿನಿಮಾ ಮಾಡಿದ್ದಾರೆ, ಮಾಡುತ್ತಿದ್ದಾರೆ. ಇದೀಗ ಶಾನ್ವಿ, ರಾಜಸ್ಥಾನಿ ಹುಡುಗಿಯಾಗಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ!

ಹೌದು, ಮಾಲಿವುಡ್​ನಲ್ಲಿ ‘ಮಹಾವೀರಯಾರ್’ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ಈ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ ನಾಯಕಿ. ಈ ಮೂಲಕ ಮೊದಲ ಬಾರಿ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕನ್ನಡ ನಟ-ನಟಿಯರು ಪರಭಾಷೆಗೆ ಹೋಗುವುದು ಸಾಮಾನ್ಯವಾಗಿದೆ. ಇದೀಗ ಚೊಚ್ಚಲ ಮಲಯಾಳಿ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ಅಷ್ಟೇ ಎಗ್ಸೈಟ್​ ಆಗಿದ್ದಾರೆ ಶಾನ್ವಿ.

ಈ ಬಗ್ಗೆ ‘ವಿಜಯವಾಣಿ’ ಜತೆಗೆ ಮಾತನಾಡಿದ ಶಾನ್ವಿ, ‘ಇದೊಂದು ಪಿರಿಯಡ್ ಸಿನಿಮಾ. ಸಂಪೂರ್ಣ ಕಾಲ್ಪನಿಕ ಕಥೆ ಇರುವ ಈ ಚಿತ್ರದಲ್ಲಿ ನಾನು ರಾಜಸ್ಥಾನಿಯ ರಾಜಮನೆತನದ 18 ವರ್ಷದ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ಈಗಾಗಲೇ ಶೂಟಿಂಗ್ ಶುರುವಾಗಿದೆ’ ಎನ್ನುತ್ತಾರವರು.

ಜೈಪುರದಲ್ಲಿ ಚಿತ್ರದ ಶೂಟಿಂಗ್ ಆರಂಭಿಸಿರುವ ‘ಮಹಾವೀರಯಾರ್’ ಚಿತ್ರದ ವಿಶೇಷತೆ ಏನೆಂದರೆ, ಈ ಚಿತ್ರವನ್ನು ಮಲಯಾಳಂನ ಖ್ಯಾತ ನಟ ನಿವಿನ್ ಪೌಲಿ ನಿರ್ಮಾಣ ಮಾಡುತ್ತಿದ್ದು, ಒಂದು ವಿಶೇಷ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಆಸಿಫ್ ಅಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಹಿಂದೆ ನಿವಿನ್ ಜತೆಗೆ ‘1983’ ಮತ್ತು ‘ಆಕ್ಷನ್ ಹೀರೋ ಬಿಜು’ ಸಿನಿಮಾ ನಿರ್ದೇಶನ ಮಾಡಿದ್ದ ಅಬ್ರಿದ್ ಶೈನ್ ಇದೀಗ ಮತ್ತೆ ನಿವಿನ್ ಜತೆ ‘ಮಹಾವೀರಯಾರ್’ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ತೆಲುಗಿನಲ್ಲಿ ನಟಿಸಿದ್ದೇನೆ. ಇದೀಗ ‘ಮಹಾವೀರಯಾರ್’ ಚಿತ್ರದ ಮೂಲಕ ಮಾಲಿವುಡ್ ಅವಕಾಶ ಸಿಕ್ಕಿದೆ. ಈ ಚಿತ್ರದಲ್ಲಿ ನನ್ನದು 18 ವರ್ಷದ ಹುಡುಗಿಯ ಪಾತ್ರ. ಹಳೆಯ ಕಾಲದ ಕಥೆಗೆ ಕಾಲ್ಪನಿಕ ಟಚ್ ನೀಡಲಾಗಿದೆ.

| ಶಾನ್ವಿ ಶ್ರೀವಾತ್ಸವ ನಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net