ಸಾಹಸಿ ‘ಶಾನುಭೋಗರ ಮಗಳು’: ಸ್ವಾತಂತ್ರ್ಯಪೂರ್ವ ಕಥೆಯಲ್ಲಿ ರಾಗಿಣಿ ಪ್ರಜ್ವಲ್, ನಿರಂಜನ್

niru 1
Published on

ಬೆಂಗಳೂರು: ಸದಭಿರುಚಿ ಚಿತ್ರಗಳ ನಿರ್ದೇಶಕ ಕೂಡ್ಲು ರಾಮಕೃಷ್ಣ ಅವರ ‘ಶಾನುಭೋಗರ ಮಗಳು’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಲೇಖಕಿ ಭಾಗ್ಯ ಕೃಷ್ಣಮೂರ್ತಿ ರಚಿತ ಕಾದಂಬರಿಯಾಧಾರಿತ ಚಿತ್ರವಿದು. ಇದರಲ್ಲಿ ‘ಲಾ’ ನಟಿ ರಾಗಿಣಿ ಪ್ರಜ್ವಲ್, ‘ಜಾಲಿಡೇಸ್’, ‘ಕೇಸ್ ನಂ 18/9’ ಖ್ಯಾತಿಯ ನಿರಂಜನ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಜತೆಗೆ ಕಿಶೋರ್, ರಮೇಶ್ ಭಟ್, ಪದ್ಮಾ ವಾಸಂತಿ, ಸುಧಾ ಬೆಳವಾಡಿ ಕಲಾ ಬಳಗದಲ್ಲಿದ್ದಾರೆ. ಸಿನಿಮಾದ ಬಗ್ಗೆ ಕೂಡ್ಲು ರಾಮಕೃಷ್ಣ, ‘ಲೇಖಕಿ ಭಾಗ್ಯ ಕೃಷ್ಣಮೂರ್ತಿ ನನಗೆ ನೀಡಿದ್ದ ‘ಶಾನುಭೋಗರ ಮಗಳು’ ಪುಸ್ತಕ ಓದಿದಾಗ ಸಿನಿಮಾ ಮಾಡಬಹುದು ಎಂದುಕೊಂಡಿದ್ದೆ. ಒಮ್ಮೆ ನಿರ್ಮಾಪಕರ ಆಫೀಸ್‌ಗೆ ಈ ಪುಸ್ತಕ ತೆಗೆದುಕೊಂಡು ಹೋಗಿದ್ದೆ. ಅವರು ಈ ಕಾದಂಬರಿಯನ್ನು ಓದಿ, ನನಗೆ ಕರೆ ಮಾಡಿ ಸಿನಿಮಾ ಮಾಡೋಣವೆಂದರು. ನಾನು ಈ ಕೃತಿ ಓದುವಾಗಲೇ ರಾಗಿಣಿ ಪ್ರಜ್ವಲ್ ಶಾನುಭೋಗರ ಮಗಳ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಿದ್ದೆ. ಅವರನ್ನು ಸಂಪರ್ಕಿಸಿದಾಗ ಖುಷಿಯಿಂದ ಒಪ್ಪಿಕೊಂಡರು. ರಾಗಿಣಿ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದು, ಈ ಚಿತ್ರ ಅವರನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಇನ್ನು ಕಿಶೋರ್ ಹಾಗೂ ನಿರಂಜನ್ ಶೆಟ್ಟಿ, ತಮ್ಮ ಪಾತ್ರಗಳಲ್ಲಿ ಜೀವಿಸಿದ್ದಾರೆ. ಈ ಚಿತ್ರಕ್ಕಾಗಿ ಸಾಕಷ್ಟು ಅಧ್ಯಯನ ಮಾಡಿದ್ದೇವೆ. ಹಾಗೆಯೇ ಚಿತ್ರೀಕರಣಕ್ಕೆ ಲೋಕೇಷನ್ ಹುಡುಕುವುದೇ ನಮಗೆ ದೊಡ್ಡ ಸವಾಲಾಗಿತ್ತು. ಕೊನೆಗೆ ಶ್ರೀರಂಗಪಟ್ಟಣ, ಮೇಲುಕೋಟೆ, ಚಿಕ್ಕಬಳ್ಳಾಪುರ ಸೇರಿ ಹಲವು ಕಡೆ ಚಿತ್ರೀಕರಣ ಮಾಡಿದ್ದೇವೆ. ಇಡೀ ಕಥೆ ಕುತೂಹಲಕಾರಿಯಾಗಿದ್ದು ನೋಡಿಸಿಕೊಳ್ಳುತ್ತದೆ. ನನ್ನ 14 ಕಾದಂಬರಿಯಾಧಾರಿತ ಸಿನಿಮಾಗಳಲ್ಲಿ ಇದೇ ಮೊದಲ ಐತಿಹಾಸಿಕ ಚಿತ್ರವಾಗಿದ್ದು, ಎಲ್ಲ ರೀತಿಯಿಂದಲೂ ಸಮಾಧಾನ ತಂದಿದೆ’ ಎನ್ನುತ್ತಾರೆ.

ಪಾತ್ರಕ್ಕಾಗಿ ಸರೆಂಡರ್: ‘ಲಾ’ ಬಳಿಕ ರಾಗಿಣಿ ಪ್ರಜ್ವಲ್ ನಾಯಕಿಯಾಗಿ ಅಭಿನಯಿಸಿರುವ ಎರಡನೇ ಚಿತ್ರವಿದು. ಈ ಸವಾಲಿನ ಐತಿಹಾಸಿಕ ಪಾತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದರಂತೆ. ‘ಇದೊಂದು ಮಹಿಳಾ ಪ್ರಧಾನ ಸಿನಿಮಾ. ನನ್ನ ಪ್ರತಿಭೆಗೆ ಸಾಕಷ್ಟು ಅವಕಾಶ ದೊರೆತಿದೆ. ನಿರ್ದೇಶಕರು ಕಥೆ ಹೇಳುವಾಗಲೇ ನನಗೆ ಈ ಪಾತ್ರ ಒಪ್ಪುತ್ತದೆ ಎಂದು ನಿರ್ಧರಿಸಿದ್ದೆ. ಕುಟುಂಬದ ಜತೆ ಚರ್ಚೆ ಮಾಡಿ ಕನ್ಫರ್ಮ್ ಮಾಡಿದೆ. ಶೂಟಿಂಗ್ ಮೊದಲ ದಿನದಿಂದ ಕೊನೆಯ ದಿನದವರೆಗೂ ಒಳ್ಳೆಯ ಅನುಭವ ನೀಡಿದೆ. ಪಾತ್ರಕ್ಕಾಗಿ ನಾನು ಸಾಕಷ್ಟು ಸಿದ್ಧತೆ ನಡೆಸಿದೆ. ವರ್ಕ್‌ಶಾಪ್ ಕೂಡ ಮಾಡಿದ್ದೇವೆ. ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದೇನೆ. ಶರಾವತಿ ಪಾತ್ರದಲ್ಲಿ ಹೆಂಡತಿಯಾಗಿ, ಮಗಳಾಗಿ, ದಿಟ್ಟ ಹೋರಾಟಗಾರಳಾಗಿ ಮನಃಪೂರ್ವಕವಾಗಿ ಕೆಲಸ ಮಾಡಿದ್ದೇನೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.

ನೈಜ ಪಾತ್ರಗಳ ದೃಶ್ಯಕಾವ್ಯ: ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಿರಂಜನ ಶೆಟ್ಟಿ, ‘ಇದೊಂದು ಕಾಲ್ಪನಿಕ ಕಥೆಯಾದರೂ, ನೈಜತೆಗೆ ಹೆಚ್ಚು ಒತ್ತು ನೀಡಿರುವ ಸಿನಿಮಾ. ನನ್ನದು ಶಾನುಭೋಗರ ಅಳಿಯನ ಪಾತ್ರ. 8ರಿಂದ 80 ವರ್ಷ ವಯಸ್ಸಿನವರಿಗೂ ಕನೆಕ್ಟ್ ಆಗುವ ಕಥೆ. ಪಾತ್ರಕ್ಕಾಗಿ ಕೂದಲು ಬಿಟ್ಟಿದ್ದೆ. ಎಲ್ಲ ಪಾತ್ರಗಳು ನೈಜತೆಯಿಂದ ಕೂಡಿದ್ದು, ದೃಶ್ಯಕಾವ್ಯದಂತೆ ಮೂಡಿಬಂದಿದೆ. ಹಿರಿಯ ಕಲಾವಿದರಾದ ರಮೇಶ್ ಭಟ್, ಕಿಶೋರ್, ಸುಧಾ ಬೆಳವಾಡಿ ಅವರಿಂದ ಸಾಕಷ್ಟು ಕಲಿತಿದ್ದೇವೆ’ ಎಂದು ಹೇಳಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net