

ಚಿತ್ರ: ಶಾನುಭೋಗರ ಮಗಳು
ನಿರ್ದೇಶನ: ಕೂಡ್ಲು ರಾಮಕೃಷ್ಣ
ತಾರಾಗಣ: ರಾಗಿಣಿ ಪ್ರಜ್ವಲ್, ನಿರಂಜನ್ ಶೆಟ್ಟಿ, ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ ಮತ್ತಿತರರು
ರೇಟಿಂಗ್: 3.5
ಶಿವ ಸ್ಥಾವರಮಠ
ಕಾದಂಬರಿಗಳಿಗೆ ದೃಶ್ಯರೂಪ ನೀಡುವುದು ಸವಾಲಿನ ವಿಷಯ. ಕಾಲ್ಪನಿಕ ಸಂಗತಿಗಳನ್ನು ಪ್ರೇಕ್ಷಕರ ಕಣ್ಣಿಗೆ ಕಟ್ಟುವಂತೆ ನಿರೂಪಿಸಬೇಕಾಗುತ್ತದೆ. ಈ ಹಿಂದೆ 14 ಕೃತಿಗಳನ್ನು ಸಿನಿಮಾ ಮಾಡಿರುವ ಅನುಭವಿ ನಿರ್ದೇಶಕ ಕೂಡ್ಲು ರಾಮಕೃಷ್ಣ ‘ಶಾನುಭೋಗರ ಮಗಳು’ ಕಾದಂಬರಿಯನ್ನು ಚಿತ್ರವಾಗಿಸಿದ್ದು, ಆ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ಕಥೆ ಹೇಳಿದ್ದಾರೆ.
ಶರಾವತಿ (ರಾಗಿಣಿ ಪ್ರಜ್ವಲ್) ಶಾನುಭೋಗರ ಮಗಳು. ಗೋಪಿಯ (ನಿರಂಜನ್) ಮುದ್ದಿನ ಮಡದಿಯಾಗಿ, ಅಪ್ಪ-ಅಮ್ಮನ ಮೆಚ್ಚಿನ ಮಗಳಾಗಿ, ಅತ್ತೆ-ಮಾವನಿಗೆ ನೆಚ್ಚಿನ ಸೊಸೆಯಾಗಿರುತ್ತಾಳೆ. ಶರಾವತಿಯ ಮೈದುನ ಹಾಗೂ ಸಹೋದರ ಬ್ರಿಟಿಷರ ವಿರುದ್ಧ ರಹಸ್ಯವಾಗಿ ಸಮರ ಸಾರಿರುತ್ತಾರೆ. ಇವರಿಗೆ ಬೆಂಬಲವಾಗಿ ಶರಾವತಿ ನಿಂತಿರುತ್ತಾಳೆ. ಆದರೆ, ಕೊನೆಯ ಘಳಿಗೆಯಲ್ಲಿ ಬ್ರಿಟಿಷರ ಬಂದೂಕಿನ ನಳಿಕೆಗೆ ಸಹೋದರ ಹಾಗೂ ಮೈದುನ ಹತರಾಗುತ್ತಾರೆ. ಈ ಸೇಡಿಗಾಗಿ ಆಕೆ ಆಂಗ್ಲರ ವಿರುದ್ಧ ಹೇಗೆ ಸಿಡಿದೇಳುತ್ತಾಳೆ ಎಂಬುದು ಕಥೆ. ಆರಂಭದಿಂದ ಕ್ಲೈಮ್ಯಾಕ್ಸ್‌ವರೆಗೆ ಚಿತ್ರ ಒಂದೇ ಗತಿಯಲ್ಲಿ ಸಾಗುತ್ತದೆ. ಮೊದಲರ್ಧ ಕುಟುಂಬ, ಸಂಬಂಧಗಳು ಎಂದು ಸಾಗಿದರೆ, ದ್ವಿತೀಯಾರ್ಧದಲ್ಲಿ ಬ್ರಿಟಿಷರ ವಿರುದ್ಧ ಕಾಳಗ ಶುರುವಾಗುತ್ತದೆ. ಕೂಡ್ಲು ರಾಮಕೃಷ್ಣ ಅವರು ಭಾಗ್ಯ ಕೃಷ್ಣಮೂರ್ತಿ ರಚಿಸಿರುವ ಕಾದಂಬರಿಯನ್ನು ಸರಳವಾಗಿ ದೃಶ್ಯರೂಪದಲ್ಲಿ ನಿರೂಪಿಸಿದ್ದಾರೆ. ಕಾಲ್ಪನಿಕ ಕಥೆಗೆ ಪಾತ್ರಗಳ ಮೂಲಕ ನೈಜ ರೂಪ ಕೊಡುವ ಪ್ರಯತ್ನ ಮಾಡಿದ್ದಾರೆ. ಕಥೆಗೆ ಪೂರಕವಾಗಿ ಮೇಕಿಂಗ್ ಕೂಡ ಅದ್ದೂರಿಯಾಗಿ ಮೂಡಿಬಂದಿದ್ದರೆ, ಸಿನಿಮಾ ಇನ್ನಷ್ಟು ಹತ್ತಿರವಾಗುತ್ತಿತ್ತು.
ಬಹುದಿನಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡಿರುವ ರಾಗಿಣಿ ಪ್ರಜ್ವಲ್, ಶರಾವತಿ ಪಾತ್ರಕ್ಕೆ ಒಪ್ಪಿದ್ದಾರೆ. ವೇಷಭೂಷಣ, ಹಾವ-ಭಾವ, ಎಮೋಷನಲ್ ದೃಶ್ಯಗಳಲ್ಲಿ ಗಮನಸೆಳೆಯುತ್ತಾರೆ. ಡಬ್ಬಿಂಗ್ ವಿಚಾರದಲ್ಲಿ ಇನ್ನಷ್ಟು ಶ್ರಮ ವಹಿಸಬೇಕಿತ್ತು. ನಿರಂಜನ್ ಶೆಟ್ಟಿ, ಗೋಪಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಐತಿಹಾಸಿಕ ಪಾತ್ರಗಳಿಗೆ ಭರವಸೆಯಾಗಿ ಕಾಣುತ್ತಾರೆ. ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ ಪಾತ್ರಗಳು ಕಥೆಗೆ ಪೂರಕವಾಗಿವೆ. ಸ್ವಾತಂತ್ರ್ಯಪೂರ್ವದ ಕಥೆಗೆ ಜೈ ಆನಂದ್ ಛಾಯಾಗ್ರಹಣ ಅಚ್ಚುಕಟ್ಟಾಗಿ ಮೂಡಿಬಂದಿದೆ. ರಮೇಶ್ ಕೃಷ್ಣ ಸಂಗೀತದ ಇಂಟ್ರೋ ಸಾಂಗ್ ನೆನಪಿನಲ್ಲಿ ಉಳಿಯುತ್ತದೆ. ಕನ್ನಡದಲ್ಲಿ ಐತಿಹಾಸಿಕ ಹಾಗೂ ಸ್ವಾತಂತ್ರ್ಯಪೂರ್ವ ಕಥೆಗಳು ವಿರಳವಾಗುತ್ತಿರುವ ಸಮಯದಲ್ಲಿ ‘ಶಾನುಭೋಗರ ಮಗಳು’ ಆ ಸ್ಥಾನವನ್ನು ತುಂಬುವ ಸಿನಿಮಾ.