ಇದಕ್ಕೇನಾ ಪ್ರೀತಿಯಿಂದ ಸಾಕಿ ಸಲುಹಿದ್ದು? ದತ್ತು ಪುತ್ರಿಯ ದುಷ್ಕೃತ್ಯ ನೆನೆದು ಶಕೀಲಾ ಕಣ್ಣೀರು

Shakeela
Published on

ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟಿ ಮತ್ತು ಸಾಫ್ಟ್ ಪೋರ್ನ್ ನಟಿ ಎಂದೇ ಖ್ಯಾತರಾದ ಶಕೀಲಾ ಅವರ ಮೇಲೆ ದತ್ತು ಪುತ್ರಿ ಶೀತಲ್​ ಹಲ್ಲೆ ಮಾಡಿದ್ದು, ಶಕೀಲಾ ತಲೆಗೆ ಗಂಭೀರ ಗಾಯವಾಗಿರುವುದಾಗಿ ಭಾನುವಾರ ವರದಿಯಾಗಿದೆ.

ಈ ಘಟನೆ ಶನಿವಾರ ಸಂಜೆ ನಡೆದಿದೆ. ಗಲಾಟೆಯಲ್ಲಿ ಶಕೀಲಾ ಪರ ವಕೀಲೆ ಮೇಲೂ ಹಲ್ಲೆ ನಡೆದಿದ್ದು, ವಕೀಲೆ ಸೌಂದರ್ಯ ನೀಡಿದ ದೂರಿನ ಆಧಾರದ ಮೇಲೆ ಕೊಯಮತ್ತೂರು ಪೊಲೀಸ್​ ಠಾಣೆಯಲ್ಲಿ ದತ್ತು ಪುತ್ರಿ ಶೀತಲ್​ ವಿರುದ್ಧ ಪ್ರಕರಣ ದಾಖಲಾಗಿದೆ.

ವಿವರಣೆಗೆ ಬರುವುದಾದರೆ, ಶಕೀಲಾ ಅವರು ಚೆನ್ನೈನ ಕೊಡಂಬಾಕ್ಕಂ ಪ್ರದೇಶದ ಯುನೈಟೆಡ್ ಇಂಡಿಯಾ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಶನಿವಾರ ಶಕೀಲಾ ಅವರು ತನ್ನ ಸಾಕು ಮಗಳು ಶೀತಲ್ ಜತೆಗೆ ತೀವ್ರ ಮಾತಿನ ಚಕಮಕಿ ನಡೆಸಿದರು. ಇಬ್ಬರ ನಡುವಿನ ವಾಗ್ವಾದ ಶೀಘ್ರದಲ್ಲೇ ಹೊಡೆದಾಟಕ್ಕೆ ತಿರುಗಿತು. ಶಕೀಲಾ ಅವರನ್ನು ಥಳಿಸಲು ಶೀತಲ್, ಆಕೆಯ ಹೆತ್ತ ತಾಯಿ ಮತ್ತು ಸಹೋದರಿ ಗುಂಪುಗೂಡಿದರು ಎಂದು ಆರೋಪಿಸಲಾಗಿದೆ. ಜಗಳದಲ್ಲಿ ಶಕೀಲಾ ಅವರು ಜಾರಿ ಬಿದ್ದಿದ್ದಾರೆ.

ಇದಾದ ಬಳಿಕ ಶಕೀಲಾ ತನ್ನ ಮನೆಯೊಳಗೆ ನಡೆದ ಅಹಿತಕರ ಘಟನೆಯ ಬಗ್ಗೆ ತನ್ನ ಸ್ನೇಹಿತೆ ನರ್ಮದಾಗೆ ತಿಳಿಸಿದ್ದಾರೆ. ನಂತರ ವಕೀಲೆ ಸೌಂದರ್ಯ ಸ್ಥಳಕ್ಕೆ ತಲುಪಿದ್ದು, ಶೀತಲ್ ಅವರನ್ನೂ ಮಾತನಾಡಲು ಕರೆಸಲಾಗಿತ್ತು. ಮಾತುಕತೆ ವೇಳೆ ಶೀತಲ್, ಆಕೆಯ ತಾಯಿ ಮತ್ತು ಸಹೋದರಿ ಸಿಗರೇಟ್ ಟ್ರೇನಿಂದ ಶಕೀಲಾ ಅವರ ತಲೆಗೆ ಹೊಡೆದು ವಕೀಲರ ಕೈಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಸಮಸ್ಯೆಗಳು ಮತ್ತು ಹಣದ ವಿವಾದವು ಜಗಳಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ತನಗೆ ದೈಹಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಶೀತಲ್ ವಿರುದ್ಧ ಶಕೀಲಾ ಅವರು ದೂರು ದಾಖಲಿಸಿದ್ದಾರೆ. ಅಲ್ಲದೆ, ಪ್ರೀತಿಯಿಂದ ಸಾಕು ಸಲುಹಿದ ಮಗಳು ತನ್ನ ಮೇಲೆಯೇ ತಿರುಗಿಬಿದ್ದಿದ್ದನ್ನು ನೋಡಿ ಶಕೀಲಾ ನೊಂದುಕೊಂಡು ಕಣ್ಣೀರಿಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net