ಅಲ್ಲು ಅರ್ಜುನ್ ಡ್ಯಾನ್ಸ್‌ಗೆ ಬಾಲಿವುಡ್ ಮಂದಿ ಹೀಗಂತಾರೆ ...

Allu Arjjun Final
Published on

ಟಾಲಿವುಡ್‌ನ ಸ್ಟಾರ್ ನಟ ಅಲ್ಲು ಅರ್ಜುನ್ ಡ್ಯಾನ್ಸ್‌ಗೆ ಮರುಳಾಗದವರೇ ಇಲ್ಲ. ಆಂಧ್ರ ಮತ್ತು ತೆಲಂಗಾಣದಲ್ಲಿ ಅವರ ಡ್ಯಾನ್ಸ್ ನೋಡಿಯೇ, ಹಲವರು ಅಭಿಮಾನಿಗಳಾಗಿದ್ದಿದೆ. ಈ ಅಭಿಮಾನ ಈಗ ಬರೀ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಲ್ಲ, ಬಾಲವುಡ್‌ಗೂ ಹಬ್ಬಿದೆ. ಬಾಲಿವುಡ್‌ನ ಸ್ಟಾರ್ ಕಲಾವಿದರೆಲ್ಲಾ ಅರ್ಜುನ್ ಡ್ಯಾನ್ಸ್‌ಗೆ ವ್ಹಾ ವ್ಹಾ ಎನ್ನುತ್ತಿದ್ದಾರೆ.

ಹೌದು, ಅಲ್ಲು ಅರ್ಜುನ್ ಡ್ಯಾನ್ಸ್‌ಗೆ ಸ್ವತಃ ಬಾಲಿವುಡ್ ಮಂದಿಯೇ ಬೆರಗಾಗಿದ್ದಾರೆ. ಅದರಲ್ಲೂ ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ‘ಅಲಾ ವೈಕುಂಠಪುರಂಲೋ’ ಚಿತ್ರದಲ್ಲಿನ ಹಾಡುಗಳಿಗೆ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡಿರುವುದನ್ನು ನೋಡಿ ಹಲವರು ಹುಬ್ಬೇರಿಸಿದ್ದಾರೆ. ಕೆಲವು ದಿನಗಳ ಹಿಂದೆ ದಿಶಾ ಪಠಾಣಿ, ಅಲ್ಲು ಅರ್ಜುನ್ ಡ್ಯಾನ್ಸ್ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. ಡ್ಯಾನ್ಸು ಮಾಡಿದರೆ, ಆ ರೀತಿ ಮಾಡಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈಗ ಅವರ ಸಾಲಿಗೆ ಶಾಹೀದ್ ಕಪೂರ್ ಸಹ ಸೇರಿಕೊಂಡಿದ್ದಾರೆ. ಬಾಲಿವುಡ್‌ನ ಕೆಲವು ಒಳ್ಳೆಯ ಡ್ಯಾನ್ಸರ್‌ಗಳ ಪೈಕಿ ಶಾಹೀದ್ ಸಹ ಒಬ್ಬರು. ಹೀರೋ ಆಗುವುದಕ್ಕೆ ಮುನ್ನ ಅವರು ಕೆಲವು ಚಿತ್ರಗಳಲ್ಲಿ ಡ್ಯಾನ್ಸರ್ ಆಗಿಯೂ ಕೆಲಸ ಮಾಡಿದ್ದರು. ಉದಾಹರಣೆಗೆ, ‘ತಾಲ್’ ಚಿತ್ರದ ಹಾಡೊಂದರಲ್ಲಿ ಐಶ್ವರ್ಯ ರೈ ಹಿಂದೆ ಶಾಹೀದ್ ಅವರನ್ನೂ ನೋಡಬಹುದು. ಹೀಗೆ ಕುಣಿಕುಣಿದೇ ಚಿತ್ರದಲ್ಲಿ ಹೀರೋ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿರುವ ಶಾಹೀದ್, ಈಗ ಅಲ್ಲು ಅರ್ಜುನ್ ಅವರನ್ನು ಬಹಳ ಮೆಚ್ಚಿಕೊಂಡಿದ್ದಾರೆ.

ಈ ಕುರಿತು ಟ್ವಿಟರ್‌ನಲ್ಲಿ ಅವರು ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು, ಅಲ್ಲು ಅರ್ಜುನ್ ಅವರ ನೃತ್ಯದ ಬಗ್ಗೆ ಏನು ಹೇಳುತ್ತೀರಿ ಎಂದಾಗ, ‘ಲವ್ ಹಿಸ್ ಡ್ಯಾನ್ಸಿಂಗ್ ಸ್ಕಿಲ್ಸ್’ ಅಂತ ಶಾಹೀದ್ ಮೆಚ್ಚುಗೆ ಸೂಚಿಸಿದ್ದಾರೆ.

ಅಲ್ಲಿಗೆ ಅರ್ಜುನ್ ಪ್ರತಿಭೆ ಕ್ರಮೇಣ ಬಾಲಿವುಡ್‌ನತ್ತ ಪಸರಿಸುತ್ತಿದೆ. ಈಗಾಗಲೇ ಅವರ ಹಲವು ಚಿತ್ರಗಳು ಹಿಂದಿಗೆ ಡಬ್ ಆಗಿ ಜನಪ್ರಿಯವಾಗಿದೆ. ಮುಂದೊಂದು ದಿನ, ಅಲ್ಲು ಅರ್ಜುನ್ ಬಾಲಿವುಡ್‌ನತ್ತ ಪಯಣ ಬೆಳೆಸಿದರೆ, ಅದರಲ್ಲಿ ಆಶ್ಚರ್ಯವೇನಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net