

ಬೆಂಗಳೂರು: ಮಹೇಶ್ ಗೌಡ ನಿರ್ದೇಶನದ ‘ತ್ರಿಬಲ್ ರೈಡಿಂಗ್’ ಸಿನಿಮಾ ಹಲವು ವಿಚಾರಕ್ಕೆ ಸದ್ದು ಮಾಡುತ್ತಿದೆ. ಮೂವರು ನಾಯಕಿಯರಾದ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್ ಜತೆ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದಾರೆ.
ಈಗಾಗಲೇ ಚಿತ್ರದ ಮಾತಿನ ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ತಂಡ ಎರಡು ಹಾಡುಗಳನ್ನಷ್ಟೇ ಬಾಕಿ ಉಳಿಸಿಕೊಂಡಿದೆ. ಹೀಗಿರುವಾಗಲೇ ಚೊಚ್ಚಲ ಹಿರಿತೆರೆ ಪದಾರ್ಪಣೆ ಸಿನಿಮಾ ‘ತ್ರಿಬಲ್ ರೈಡಿಂಗ್’ ಬಗ್ಗೆ ನಟಿ ಮೇಘಾ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
‘ಮೊದಲ ಸಿನಿಮಾದಲ್ಲಿಯೇ ಗಣೇಶ್ ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಅದೇ ರೀತಿ ಚಿತ್ರೀಕರಣದ ಅನುಭವವೂ ವಿಭಿನ್ನ. ಆರಂಭದಲ್ಲಿ ಕಿರುತೆರೆ ಮತ್ತು ಹಿರಿತೆರೆ ಚಿತ್ರೀಕರಣ ಒಂದೇ ರೀತಿ ಇರಲಿದೆ ಎಂದುಕೊಂಡಿದ್ದೆ. ಶೂಟಿಂಗ್ ಹೇಗಿರಲಿದೆ ಎಂಬ ಅಳುಕೂ ಇತ್ತು. ಆದರೆ, ನಿಧಾನವಾಗಿ ಇಡೀ ತಂಡ ಮನೆಯವರಂತೆ ಅನಿಸಿತು. 25ರಿಂದ 30 ದಿನಗಳ ಕಾಲ ಶೂಟಿಂಗ್ ಮಾಡಿದ್ದೇನೆ.
ಮೊದಲ ಚಿತ್ರದಲ್ಲಿ ನನ್ನ ಪಾತ್ರವೂ ಅಷ್ಟೇ ವಿಶೇಷವಾಗಿದೆ. ಸದ್ಯ ನನ್ನ ಪಾಲಿನ ಶೂಟಿಂಗ್ ಮುಗಿದಿದೆ’ ಎಂದು ಮಾಹಿತಿ ನೀಡುತ್ತಾರೆ. ಇದೆಲ್ಲವನ್ನು ಹೊರತುಪಡಿಸಿದರೆ, ಇನ್ನುಳಿದ ಎರಡು ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಿಸುವ ಪ್ಲಾನ್ ನಿರ್ದೇಶಕರದ್ದು. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲವನ್ನೂ ಮುಂದೂಡಿದ್ದಾರೆ. ಸಾಯಿ ಕಾರ್ತಿಕ್ ಸಂಗೀತ, ಜೈ ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. ರಾಮ್ ಗೋಪಾಲ್ ಬಂಡವಾಳ ಹೂಡುತ್ತಿದ್ದಾರೆ.