

ಭಾರತದ ಯಶಸ್ವೀ ಮಂಗಳಯಾನ ಕುರಿತು ವಿಶ್ವ ಸಿನಿಮಾ ಇತಿಹಾಸದಲ್ಲೇ ಮೊದಲ ಬಾರಿಗೆ ವೈಜ್ಞಾನಿಕ ಸಂಸ್ಕೃತ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿದೆ. ‘ಯಾನಂ’ ಹೆಸರಿನ ಈ ಚಿತ್ರವು ಇದೇ ತಿಂಗಳು ಪ್ರೇಕ್ಷಕರನ್ನು ತಲುಪಲು ಸಿದ್ಧವಾಗಿದೆ. ಇದೊಂದು ಸಾಕ್ಷ್ಯಚಿತ್ರವಾಗಿದ್ದು, ಇದೇ ಆಗಸ್ಟ್ 21ರಂದು ಚೆನ್ನೈನಲ್ಲಿ ಮೊದಲ ಬಾರಿಗೆ ಆಯ್ದ ಕೆಲವು ಪ್ರೇಕ್ಷಕರಿಗೆ ಪ್ರದರ್ಶಿಸಲಾಗುವುದು.
ಈ ಕುರಿತು ಮಾತನಾಡಿರುವ ನಿರ್ದೇಶಕ ವಿನೋದ್ ಮಂಕರ್, ‘2013ರಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ್ದರು. ಈಗ ಈ ಚಿತ್ರವನ್ನೂ ಇಸ್ರೋ ಚೇರ್ಮನ್ ಎಸ್. ಸೋಮನಾಥ್ ಅವರೇ ಬಿಡುಗಡೆ ಮಾಡಲಿದ್ದಾರೆ. ಚೆನ್ನೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಇಸ್ರೋ ಮಾಜಿ ಚೇರ್ಮನ್ ಕೆ. ರಾಧಾಕೃಷ್ಣನ್, ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ನಿರ್ದೇಶಕ ಎಸ್. ಉನ್ನಿಕೃಷ್ಣನ್ ನಾಯರ್, ದಕ್ಷಿಣ ಭಾರತ ಫಿಲಂ ಛೇಂಬರ್ ಕಾರ್ಯದರ್ಶಿ ರವಿ ಕೊಟ್ಟರಕ್ಕರ ಕೂಡ ಭಾಗವಹಿಸಲಿದ್ದಾರೆ’ ಎಂದು ಹೇಳಿದ್ದಾರೆ.
‘ಯಾನಂ’, ರಾಧಾಕೃಷ್ಣನ್ ಅವರ ‘ಮೈ ಒಡಿಸ್ಸಿ: ಮೆಮೊರ್ಯ್ಸ್ ಆಫ್ ದಿ ಮ್ಯಾನ್ ಬಿಹೈಂಡ್ ದಿ ಮಂಗಳಯಾನ್ ಮಿಷನ್’ ಪುಸ್ತಕವನ್ನು ಆಧರಿಸಿದ ಚಿತ್ರ ಎಂದು ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ವಿನೋದ್, ‘ಇಸ್ರೋ ಮತ್ತು ನಮ್ಮ ವಿಜ್ಞಾನಿಗಳ ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ತಿಳಿಸುವುದೇ ಈ ಸಾಕ್ಷ್ಯಚಿತ್ರದ ಉದ್ದೇಶ. ಎಲ್ಲ ಬಗೆಯ ಸವಾಲುಗಳನ್ನೂ ಎದುರಿಸಿ, ಕ್ಲಿಷ್ಟಕರ ಮಾರ್ಸ್ ಮಿಷನ್ನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಗೊಳಿಸಿದ ಕಥೆಯನ್ನು ತಿಳಿಸಲಿದ್ದೇವೆ’ ಎನ್ನುತ್ತಾರೆ. ಸುಮಾರು 45 ನಿಮಿಷಗಳ ‘ಯಾನಂ’ ಸಾಕ್ಷ್ಯಚಿತ್ರದ ಸ್ಕ್ರಿಪ್ಟ್, ಸಂಭಾಷಣೆ ಎಲ್ಲವೂ ಸಂಸ್ಕೃತದಲ್ಲೇ ಇರಲಿದೆ. ಅದಕ್ಕೆ ಕಾರಣ ತಿಳಿಸುವ ನಿರ್ದೇಶಕ ವಿನೋದ್, ‘ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರಗಳ ಕುರಿತ ಬಹುತೇಕ ಮಾಹಿತಿಗಳನ್ನು ಹಿಂದಿನ ಕಾಲದಲ್ಲಿ ಸಂಸ್ಕೃತದಲ್ಲೇ ಬರೆಯಲಾಗುತ್ತಿತ್ತು. ಹೀಗಿರುವಾಗ ಅದೇ ಭಾಷೆಯಲ್ಲಿ ಈಗ ಸಿನಿಮಾ ಮಾಡುವುದರಲ್ಲಿ ತಪ್ಪೇನು?’ ಎಂದು ಪ್ರಶ್ನಿಸುತ್ತಾರೆ. ಈ ಚಿತ್ರವನ್ನು ಎವಿಎ ಪ್ರೊಡಕ್ಷನ್ಸ್ ಬ್ಯಾನರ್ನ ಅಡಿಯಲ್ಲಿ ಎವಿ ಅನೂಪ್ ನಿರ್ವಿುಸಿದ್ದಾರೆ.