ಬೆಚ್ಚಿ ಬೀಳಿಸುತ್ತಂತೆ ಸ್ಕೇರಿ ಫಾರೆಸ್ಟ್​; ಫೆ. 26ಕ್ಕೆ ಕನ್ನಡದ ಜತೆಗೆ ಹಿಂದಿಯಲ್ಲಿಯೂ ರಿಲೀಸ್

Scary Forest
Published on

ಬೆಂಗಳೂರು: ಕನ್ನಡದಲ್ಲಿ ಸಾಕಷ್ಟು ಹಾರರ್ ಕಥಾಹಂದರವಿರುವ ಚಿತ್ರಗಳು ಬಂದಿವೆ. ಹೀಗಿರುವಾಗ ಅಂಥದ್ದೆ ಭಯಬೀಳಿಸುವ ವಿಭಿನ್ನ ಕಥೆಯುಳ್ಳ 'ಸ್ಕೇರಿ ಫಾರೆಸ್ಟ್' ಚಿತ್ರ ಫೆಬ್ರವರಿ 26ರಂದು ಬಿಡುಗಡೆಯಾಗಲಿದೆ.ಈ ಚಿತ್ರಕ್ಕೆ ಪ್ರೀತಿ- ಭಯ- ಆತ್ಮ ಎಂಬ ಅಡಿಬರಹವಿದೆ. ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಸ್ನೇಹಿತ - ಸ್ನೇಹಿತೆಯರು ಸಂಶೋಧನೆಗಾಗಿ ಕಾಡಿಗೆ ತೆರಳುತ್ತಾರೆ. ‌ಆಗ ಆ‌ ಕಾಡಿನಲ್ಲಿ ಏನೆಲ್ಲಾ ನಡೆಯುತ್ತದೆ? ಎನ್ನುವುದು ಈ ಚಿತ್ರದ ಕಥಾವಸ್ತು. ಮೂಲತಃ ತುಮಕೂರಿನ ಮಾರಶೆಟ್ಟಿ ಹಳ್ಳಿಯವರಾದ ಜಯಪ್ರಭು ಆರ್ ಲಿಂಗಾಯಿತ್ ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ಅವರೇ ಈ ಚಿತ್ರದ ನಿರ್ಮಾಪಕರು.

ಸ್ನೇಹಿತರೊಬ್ಬರು ಹಿಂದಿ ಚಿತ್ರ ನಿರ್ಮಾಣಕ್ಕೆ ಹಣ ಹೂಡಲು ಕೇಳಿದಾಗ ಕನ್ನಡದಲ್ಲಿಯೂ ನಿರ್ಮಾಣ ಮಾಡಿದರೆ ಮಾತ್ರ‌‌ ಹಣ ಹೂಡುವುದಾಗಿ ಹೇಳಿದ್ದಾರೆ ಜಯಪ್ರಭು. ಚಿತ್ರದ ತಾಂತ್ರಿಕ ವರ್ಗದಲ್ಲೂ ಹೆಚ್ಚಿನ ಪಾಲು ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬಾಲಿವುಡ್ ನಲ್ಲಿ‌ ಅನುಭವ ಹೊಂದಿರುವ ಸಂಜಯ್ ಅಭೀರ್ ನಿರ್ದೇಶಿಸಿದ್ದಾರೆ.‌ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ.ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಹಾಲಿವುಡ್ ನ ಜಂಗಲ್ ಬುಕ್ 1994, ಹಿಂದಿಯ ರಾಗಿಣಿ ಎಂ.ಎಂ.ಎಸ್ 2 ಸೇರಿ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ‌ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ನಿರ್ಮಾಪಕ‌ ಜಯಪ್ರಭು ನಾಯಕನಾಗಿಯೂ ಅಭಿನಯಿಸಿದ್ದಾರೆ. ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಬಹುಭಾಷಾ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ‌ ಟೀನಾ ಪೊನ್ನಪ್ಪ, ಆಮ್‌ ರೀನ್, ಕಲ್ಪನಾ ಈ ಚಿತ್ರದ ನಾಯಕಿಯರು. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ‌ ಚಿತ್ರದ ಪ್ರಮುಖಪಾತ್ರದಲ್ಲಿ‌ ಅಭಿನಯಿಸಿದ್ದಾರೆ. ಸಿದ್ದಗಂಗಾ ಮಠದ ಆವರಣ, ತುಮಕೂರು, ಚಿಕ್ಕಮಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net