ತಾಯಿಯಾದ ಖುಷಿಯಲ್ಲಿ 'ಯುವರತ್ನ' ನಟಿ ಸಯೇಷಾ ...

Sayesha Saigal - Final
Published on

ಚೆನ್ನೈ: ಎರಡು ವರ್ಷಗಳ ಹಿಂದಷ್ಟೇ ಕಾಲಿವುಡ್​ ನಟ ಆರ್ಯ ಅವರನ್ನು ಮದುವೆಯಾಗಿದ್ದ 'ಯುವರತ್ನ' ಖ್ಯಾತಿಯ ಸಯೇಷಾ, ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರ್ಯ ಅಭಿನಯದ 'ಸರ್ಪಟ್ಟ ಪರಂಬೈ' ಚಿತ್ರವು ಇತ್ತೀಚೆಗಷ್ಟೇ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು, ಇದೀಗ ತಂದೆಯಾದ ಖುಷಿಯಲ್ಲಿ ಆರ್ಯ ಇದ್ದಾರೆ.

ಅಂದಹಾಗೆ, ಸಯೇಷಾ ತಾಯಿಯಾದ ಸುದ್ದಿಯನ್ನು ಬಹಿರಂಗಪಡಿಸಿದ್ದು, ಸಯೇಷಾ ಅಥವಾ ಆರ್ಯ ಅಲ್ಲ, ಬದಲಿಗೆ ಆರ್ಯ ಅವರ ಆಪ್ತಮಿತ್ರನಾಗಿರುವ ತಮಿಳು ನಟ ವಿಶಾಲ್​. ಈ ವಿಷಯವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಶಾಲ್​, 'ನಾನು ಅಂಕಲ್ ಆಗಿದ್ದೀನಿ. ನನ್ನ ಸಹೋದರ ಜಮ್ಮಿ ಮತ್ತು ಸಯೇಶಾ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ. ಚಿತ್ರೀಕರಣದ ಒತ್ತಡದ ನಡುವೆಯೂ ಈ ವಿಷಯ ಕೇಳಿ ಸಂತೋಷವಾಯಿತು. ಆರ್ಯ ಅಪ್ಪನಾಗಿ ಹೊಸ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಅವನಿಗೆ ಯಾವತ್ತೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದ್ದಾರೆ.

ಆರ್ಯ ಮತ್ತು ಸಯೇಷಾ ತಂದೆ-ತಾಯಿಯಾದ ವಿಷಯ ಹೊರಬೀಳುತ್ತಿದ್ದಂತೆ, ಈ ದಂಪತಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸೋಷಿಯಲ್​ ಮೀಡಿಯಾ ಮೂಲಕ ಶುಭಹಾರೈಸಿದ್ದಾರೆ.

ಕಾರಣಾಂತರಗಳಿಂದ, ಸಯೇಷಾ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆರ್ಯ ಸಹ ತಾನು ತಂದೆಯಾಗುತ್ತಿರುವ ವಿಷಯವನ್ನು ಎಲ್ಲೂ ಪ್ರಚಾರ ಮಾಡಿರಲಿಲ್ಲ. ಈಗ ಈ ದಂಪತಿಗೆ ಹೆಣ್ಣು ಮಗುವಾಗಿರುವ ವಿಷಯ ಎಲ್ಲರಿಗೂ ಅಚ್ಚರಿ ಮೂಡಿಸುವುದರ ಜತೆಗೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಈ ವರ್ಷದ ಏಪ್ರಿಲ್​ ಒಂದರಂದು ಬಿಡುಗಡೆಯಾದ 'ಯುವರತ್ನ' ಚಿತ್ರದ ನಂತರ ಸಯೇಷಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ತಾಯ್ತನದ ಜವಾಬ್ದಾರಿ ಇರುವುದರಿಂದ, ಇನ್ನೂ ಸ್ವಲ್ಪ ಸಮಯ ಅವರು ಯಾವೊಂದು ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net