

ಸಿನಿಮಾಗಳಿಗಿಂತ ಅದರ ಹಿಂದಿರುವ ಕಥೆಗಳಲ್ಲಿನ ಒಂದಷ್ಟು ಸ್ವಾರಸ್ಯಕರ ಸಂಗತಿಗಳನ್ನು ವಾರಕ್ಕೊಮ್ಮೆ ನಿಮ್ಮ ಮುಂದಿಡುವ ಪ್ರಯತ್ನವೇ ‘ಚಿತ್ರ ಕಥೆ’.
ಮಾರ್ಚ್ 3, 1934 ಕನ್ನಡಿಗರ ಪಾಲಿಗೆ ಇದು ಅವಿಸ್ಮರಣೀಯವಾದ ದಿನ. ಏಕೆಂದರೆ, 86 ವರ್ಷಗಳ ಹಿಂದೆ ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ಬಿಡುಗಡೆಯಾಗಿತ್ತು. ಅಲ್ಲಿಂದ ಪ್ರಾರಂಭವಾದ ಒಂದು ಭವ್ಯ ಪರಂಪರೆ ಅವ್ಯಾಹತವಾಗಿ ಮುಂದುವರಿದಿದೆ. ‘ಸತಿ ಸುಲೋಚನ’ ಚಿತ್ರಕ್ಕೂ ಮುನ್ನ ಕನ್ನಡದಲ್ಲಿ ಚಿತ್ರಗಳು ನಿರ್ವಣವಾಗಿಲ್ಲ ಎಂದೇನಲ್ಲ. ಆದರೆ, ಅದಕ್ಕೂ ಮುನ್ನ ಬಿಡುಗಡೆಯಾದ ಚಿತ್ರಗಳು ಮೂಕಿ ಚಿತ್ರಗಳಾಗಿದ್ದವು. ‘ಸತಿ ಸುಲೋಚನ’ ಮೊದಲ ಟಾಕಿ ಚಿತ್ರವಾದ್ದರಿಂದ, ಆ ಚಿತ್ರದ ಬಿಡುಗಡೆಯ ದಿನಾಂಕದಿಂದ ಚಿತ್ರರಂಗದ ಪ್ರಾರಂಭವವನ್ನು ಗುರುತಿಸಲಾಗುತ್ತದೆ. ಬರೀ ಕನ್ನಡದಲ್ಲಷ್ಟೇ ಅಲ್ಲ, ಎಲ್ಲ ಭಾಷೆಗಳ ಮೊದಲ ವಾಕ್ಚಿತ್ರಗಳ ಬಿಡುಗಡೆಯ ದಿನಾಂಕದಿಂದ ಆ ಭಾಷೆಯ ಚಿತ್ರರಂಗದ ಪ್ರಾರಂಭವನ್ನು ಗುರುತಿಸಲಾಗುತ್ತದೆ.
‘ಸತಿ ಸುಲೋಚನ’ ಚಿತ್ರವು ಬರೀ ಇತಿಹಾಸ ಪುಟಗಳಲ್ಲಿ ಮಾತ್ರ ಲಭ್ಯ. ಏಕೆಂದರೆ, ಚಿತ್ರದ ರೀಲುಗಳು ಕಳೆದು ಹೋಗಿ ಅದೆಷ್ಟೋ ವರ್ಷಗಳಾಗಿವೆ. ಅದು ಯಾರ ಬಳಿ ಇತ್ತೋ, ಎಲ್ಲಿಂದ ಕಳೆದು ಹೋಯಿತೋ ಯಾರಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಈ ಚಿತ್ರವನ್ನು ನೋಡಿದವರು, ಅದರ ಬಗ್ಗೆ ಮಾತನಾಡುವವರು ಈಗ ಯಾರೂ ಸಿಗುವುದಿಲ್ಲ.
‘ಸತಿ ಸುಲೋಚನ’ ಬಿಡುಗಡೆಯಾಗಿದ್ದು 1934ರಲ್ಲಾದರೂ, ನಿರ್ಮಾಣ ಕೆಲಸಗಳು 1933ರ ಡಿಸೆಂಬರ್ನಲ್ಲಿ ಪ್ರಾರಂಭವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಚಿತ್ರದ ನಿರ್ವಪಕರು ಚಮನ್ಲಾಲ್ ಡುಂಗಾಜಿ ಮತ್ತು ಷಾ ಭೂರ್ವುಲ್ ಚಮನ್ವುಲ್ಜಿ ಎಂಬ ಮಾರ್ವಾಡಿ ವ್ಯಾಪಾರಿಗಳು. ಇವರು ಸೌಥ್ ಇಂಡಿಯಾ ಮೂವೀಟೋನ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಈ ಚಿತ್ರವನ್ನು ಪ್ರಾರಂಭಿಸಿದರು. ಇದನ್ನು ನಿರ್ದೇಶಿಸಿದವರ್ಯಾರು ಗೊತ್ತಾ? ಖ್ಯಾತ ನಟಿ ಜೂಲಿ ಲಕ್ಷ್ಮೀ ಅವರ ತಂದೆ ವೈ.ವಿ. ರಾವ್.
ಈ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಎಂ.ವಿ. ಸುಬ್ಬಯ್ಯ ನಾಯ್ಡು (ಲೋಕೇಶ್ ಅವರ ತಂದೆ) ಕನ್ನಡ ಚಿತ್ರರಂಗದ ಮೊದಲ ನಾಯಕನಟರಾದರು. ಇನ್ನು ಆರ್. ನಾಗೇಂದ್ರ ರಾವ್, ತ್ರಿಪುರಾಂಬ, ಲಕ್ಷ್ಮೀ ಬಾಯಿ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಲಾಗುತ್ತದೆ. ರಾವಣನ ಮಗ ಇಂದ್ರಜಿತು ಮತ್ತು ಅವನ ಹೆಂಡತಿ ಸುಲೋಚನ ಪಾತ್ರ ಪ್ರಧಾನವಾಗಿರುವ ಈ ಚಿತ್ರಕ್ಕೆ ಬಳ್ಳಾವೆ ನರಹರಿ ಶಾಸ್ತ್ರಿಗಳು ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುವ ಮೂಲಕ ಕನ್ನಡದ ಮೊದಲ ಚಿತ್ರಸಾಹಿತಿ ಎಂದನಿಸಿಕೊಂಡಿದ್ದಾರೆ. ಆರ್. ನಾಗೇಂದ್ರ ರಾವ್ ಮತ್ತು ಪದ್ಮನಾಭ ಶಾಸ್ತ್ರಿಗಳು ಸಂಗೀತ ಸಂಯೋಜಿಸಿದ ಈ ಚಿತ್ರದಲ್ಲಿ 15 ಹಾಡುಗಳಿದ್ದವಂತೆ.
ಆಗಿನ ಕಾಲದಲ್ಲಿ ಕರ್ನಾಟಕದಲ್ಲಿ ಚಿತ್ರೀಕರಣಕ್ಕೆ ಸ್ಟುಡಿಯೋ ಆಗಲೀ ಅಥವಾ ಸೂಕ್ತ ವ್ಯವಸ್ಥೆಯಾಗಲೀ ಇಲ್ಲದಿದ್ದರಿಂದ, ಈ ಚಿತ್ರದ ಚಿತ್ರೀಕರಣ ಮಹಾರಾಷ್ಟ್ರದ ಕೊಲ್ಹಾಪುರದ ಛತ್ರಪತಿ ಸ್ಟುಡಿಯೋದಲ್ಲಿ ನಡೆದಿತ್ತಂತೆ. ಆಗಿನ ಕಾಲಕ್ಕೆ ಬ್ರಿಟಿಷ್ ಫಿಲಂ ಸೆನ್ಸಾರ್ ಬೋರ್ಡ್ ವತಿಯಿಂದ ಈ ಚಿತ್ರ ಸೆನ್ಸಾರ್ ಆಗಿ, ಕೆ.ಆರ್. ಮಾರುಕಟ್ಟೆಯ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತಂತೆ. ಸುಮಾರು 40 ಸಾವಿರ ರೂ. ಬಜೆಟ್ನಲ್ಲಿ ನಿರ್ವಣವಾದ ಈ ಚಿತ್ರ ಆಗಿನ ಕಾಲದಲ್ಲಿ ಆರು ವಾರಗಳ ಹೌಸ್ಫುಲ್ ಪ್ರದರ್ಶನ ಕಂಡಿತ್ತು ಎಂದು ಹೇಳಲಾಗುತ್ತಿದೆ.