

ಬೆಂಗಳೂರು: ಲಾಕ್ಡೌನ್ ಹಿನ್ನೆಲೆಯಲ್ಲಿ ಸಿನಿಮಾ ತಾರೆಯರು ಒಂದಿಲ್ಲ ಒಂದು ಆ್ಯಕ್ಟಿವಿಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿದ್ದುಕೊಂಡೇ ಅಭಿಮಾನಿಗಳ ಜತೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿದ್ದಾರೆ. ಇತ್ತೀಚೆಗಷ್ಟೇ ನಿರ್ದೇಶಕ ಪವನ್ ಒಡೆಯರ್ ಹೊಸ ಕ್ಲೈಮ್ಯಾಕ್ಸ್ ಎಲ್ಲಿ ಎಂಬ ಕಿರು ಚಿತ್ರ ಮಾಡಿ ಗಮನ ಸೆಳೆದಿದ್ದರು. ಇದೀಗ ನಟ ನೀನಾಸಂ ಸತೀಶ್ ಸರದಿ. ಹಾಗಂತ ಅವರೇನು ಕಿರುಚಿತ್ರ ಮಾಡುತ್ತಿಲ್ಲ. ಬದಲಿಗೆ ಚರ್ಚೆಗೆ ಸಿದ್ಧವಾಗುತ್ತಿದ್ದಾರೆ. ಹಾಡು, ಕವನಗಳನ್ನು ವಾಚನ ಮಾಡಲು ತಯಾರಿ ನಡೆಸಿದ್ದಾರೆ. ಹೌದು, ಆ ಕಾರ್ಯಕ್ಕೆ ವೇದಿಕೆ ಕಲ್ಪಿಸಿದ್ದು ಡಾ. ಬಿ. ಆರ್ ಅಂಬೇಡ್ಕರ್ ಜನ್ಮದಿನ.
ಹೌದು, ನಾಳೆ ಅಂಬೇಡ್ಕರ್ ಜನ್ಮದಿನ. ಆ ನಿಮಿತ್ತ ಇನ್ಸ್ಟಾಗ್ರಾಂನಲ್ಲಿ ಒಂದಷ್ಟು ಜನ ಸೇರಿಕೊಂಡು ಲೈವ್ ಬಂದು, ಅಂಬೇಡ್ಕರ್ ಬಗ್ಗೆ ಮಾತನಾಡಲು ಪ್ಲ್ಯಾನ್ ರೂಪಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಸತೀಶ್ ನೀನಾಸಂ ಆಫೀಶಿಯಲ್ ಪೇಜ್ನಲ್ಲಿ ನಟರಾಜ್ ಹುಳಿಯಾರ್, ಅಚ್ಯುತ್ಕುಮಾರ್, ಬಿ.ಎಂ. ಗಿರಿರಾಜ್, ಬಾಲಾಜಿ ಮನೋಹರ್, ಚಿಂತನ್, ಕಿರಣ್ ನಾಯ್ಕ್, ಗೋಪಾಲಕೃಷ್ಣ ದೇಶಪಾಂಡೆ, ರಾಘು ಶಿವಮೊಗ್ಗ ಸೇರಿ ಹಲವರು ಲೈವ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂಬೇಡ್ಕರ್ ಚಿಂತನೆಗಳು, ಹಾಡು, ಕವಿತೆ, ಪ್ರಸ್ತುತತೆಗೆ ಅವರ ಸಿದ್ಧಾಂತಗಳ ಸ್ಥಿತಿಗತಿ ಸೇರಿ ಹಲವು ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.