

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಸಾರಾ ಅಲಿ ಖಾನ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಮೊದಲಿಗೆ, ಅವರನ್ನು ನೆಪೋಟಿಸಂನ (ಸ್ವಜನಪಕ್ಷಪಾತದ) ಕೊಡುಗೆ ಎಂದು ಬಿಂಬಿಸಲಾಯಿತು. ಆ ನಂತರ ಡ್ರಗ್ಸ್ ವಿಚಾರದಲ್ಲಿ ಆಕೆಯ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆಯನ್ನು ಸಾಕಷ್ಟು ಟ್ರೋಲ್ ಮಾಡಲಾಯಿತು. ಇದೀಗ ಸಾರಾ ಅಲಿ ಖಾನ್ ಇನ್ನೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಡ್ರಗ್ಸ್ಜಾಲದಲ್ಲಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ, ಇದೀಗ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ ಅವಕಾಶಗಳಿರಲಿ, ಈಗಾಗಲೇ ಒಪ್ಪಿದ್ದ ಕೆಲವು ಚಿತ್ರಗಳು ಸಹ ಅವರ ಕೈತಪ್ಪುತ್ತಿವೆ ಎಂದು ಹೇಳಲಾಗುತ್ತಿದೆ.
ಇದಕ್ಕೆ ಹೊಸ ಉದಾಹರಣೆ, 'ಹೀರೋಪಂತಿ 2'. ಟೈಗರ್ ಶ್ರಾಫ್ ಅಭಿನಯದ ಈ ಚಿತ್ರಕ್ಕೆ ಸಾರಾ ಅಲಿ ಖಾನ್ ಸೂಕ್ತ ಎಂದು ಈ ಮುನ್ನ ಚಿತ್ರತಂಡದವರು ನಿರ್ಧರಿಸಿ, ಅವರ ಜೊತೆಗೆ ಮಾತುಕಥೆ ಸಹ ನಡೆಸಿದ್ದರಂತೆ. ಎಲ್ಲಾ ಓಕೆ ಆಗಬೇಕು ಎನ್ನುವಷ್ಟರಲ್ಲಿ, ಲಾಕ್ಡೌನ್ ಘೋಷಣೆಯಾಗಿದೆ. ಅದು ಮುಗಿಯುವಷ್ಟರಲ್ಲಿ ಡ್ರಗ್ಸ್ ಜಾಲದಲ್ಲಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದಿದೆ. ಇದರಿಂದ ತಮ್ಮ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಸಿಗಬಹುದು ಎಂಬ ಕಾರಣಕ್ಕೆ, ನಿರ್ಮಾಪಕರು ಆಕೆಯನ್ನು ಬದಲಾಯಿಸುವುದಕ್ಕೆ ತೀರ್ಮಾನಿಸಿದ್ದಾರೆ.
ಯಾವಾಗ ಇಂಥದ್ದೊಂದು ತೀರ್ಮಾನವಾಯಿತೋ, ತಕ್ಷಣವೇ ಸಾರಾ ಅವರನ್ನು ಕೈಬಿಟ್ಟು, ಅವರ ಬದಲು ತಾರಾ ಸುತಾರಿಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ತಾರಾ, ಟೈಗರ್ ಜತೆಗೆ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದಲ್ಲಿ ನಟಿಸಿದ್ದರು. ಅವರಿಬ್ಬರ ನಡುವೆ ಕೆಮಿಸ್ಟ್ರಿ ಸಹ ಚೆನ್ನಾಗಿತ್ತು. ಯಾಕೆ ಅವರಿಗೇ ನಾಯಕಿಯಾಗುವ ಅವಕಾಶ ಕೊಡಬಾರದು ಎಂದು ಯೋಚಿಸಿದ ಚಿತ್ರತಂಡ, ಸಾರಾ ಬದಲಿಗೆ ತಾರಾ ಅವರನ್ನು ಕರೆದು ಅವಕಾಶ ಕೊಟ್ಟಿದ್ದಾರೆ.
ಇದನ್ನೂ ಓದಿ: ಸನ್ನಿ ಡಿಯೋಲ್ಗೆ ‘ವೈ’ ಕೆಟಗರಿ ಭದ್ರತೆ … ಯಾಕೆ ಹೇಳಿ?
ಒಂದೊಳ್ಳೆಯ ಅವಕಾಶವನ್ನು ಕಳೆದುಕೊಂಡ ಸಾರಾ ಬೇಸರಗೊಂಡಿದ್ದರೂ, 'ಕೂಲಿ ನಂಬರ್ ಒನ್' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆ ಚಿತ್ರವಾದರೂ, ಕುಸಿಯುತ್ತಿರುವ ತಮ್ಮ ಜನಪ್ರಿಯತೆಯನ್ನು ಮೇಲಕ್ಕೆ ಎತ್ತುತ್ತದಾ ಎಂದು ಎದುರುನೋಡುತ್ತಿದ್ದಾರೆ.