

ರಾಯಚೂರು: ‘ಒಂದು ಲಾರಿಯಿಂದ ಸಾರಿಗೆ ಉದ್ಯಮಕ್ಕೆ ಕಾಲಿಟ್ಟು, ಇಂದು ದೇಶದಲ್ಲಿಯೇ ಬಹುದೊಡ್ಡ ಸಾರಿಗೆ ಉದ್ಯಮಿಯಾಗಿರುವ ಡಾ.ವಿಜಯ ಸಂಕೇಶ್ವರರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಬೇಕು’ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ವಿಜಯ ಸಂಕೇಶ್ವರರ ಜೀವನ ಆಧರಿಸಿ ನಿರ್ವಿುಸಲಾಗುತ್ತಿರುವ ‘ವಿಜಯಾನಂದ’ ಚಲನಚಿತ್ರದ ನಾಯಕ ನಿಹಾಲ್ ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ ಅವರು ಶ್ರೀಮಠಕ್ಕೆ ಶುಕ್ರವಾರ ಆಗಮಿಸಿ, ಚಲನಚಿತ್ರದ ಸ್ಕ್ರಿಪ್ಟ್ ಅನ್ನು ರಾಯರ ಮೂಲ ಬೃಂದಾವನದ ಮುಂದಿಟ್ಟು ವಿಶೇಷ ಪೂಜೆ ನೆರವೇರಿಸಿದ ನಂತರ ಶ್ರೀಗಳು ಇಬ್ಬರಿಗೆ ಸನ್ಮಾನಿಸಿ, ಆಶೀರ್ವದಿಸಿದರು.
‘ಉದ್ಯಮ ಆರಂಭದಲ್ಲಿ ಎದುರಾದ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಡಾ.ವಿಜಯ ಸಂಕೇಶ್ವರ ಉದ್ಯಮವನ್ನು ದೇಶಾದ್ಯಂತ ವಿಸ್ತರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಅವರ ಜೀವನ, ಉದ್ಯಮದಲ್ಲಿ ಎತ್ತರಕ್ಕೆ ಬೆಳೆದ ಪರಿ ಇಂದಿನ ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅವರ ಜೀವನಾಧರಿತ ಚಲನಚಿತ್ರವನ್ನು ಅವರ ಪುತ್ರ ಆನಂದ ಸಂಕೇಶ್ವರ ನಿರ್ಮಾಣ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಸಂಕೇಶ್ವರರು ಶ್ರೀಮಠದ ಪರಮ ಭಕ್ತರಾಗಿದ್ದು, ಚಲನಚಿತ್ರದ ಚಿತ್ರೀಕರಣ ಶೀಘ್ರಗತಿಯಲ್ಲಿ ಪೂರ್ಣಗೊಂಡು ಅಭೂತಪೂರ್ವ ಯಶಸ್ಸು ಸಾಧಿಸಲಿ’ ಎಂದು ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವದಿಸಿದರು.