ಜ.10ಕ್ಕೆ ಸಂಜು ಗೀತಾ ಮದುವೆ!: ಚಿತ್ರ ಕಥೆಗೆ ನಟ ಸುದೀಪ್ ಕಾರಣ ಎಂದ ನಿರ್ದೇಶಕ ನಾಗಶೇಖರ್

sanju weds geetha
Published on

ಬೆಂಗಳೂರು: ನಾಗಶೇಖರ್ ನಿರ್ದೇಶನದಲ್ಲಿ 2011ರಲ್ಲಿ ತೆರೆಕಂಡಿದ್ದ ಸಿನಿಮಾ ‘ಸಂಜು ವೆಡ್ಸ್ ಗೀತಾ’. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗಿತ್ತು. 14 ವರ್ಷಗಳ ಬಳಿಕ ಇದೀಗ ನಾಗಶೇಖರ್ ‘ಸಂಜು ವೆಡ್ಸ್ ಗೀತಾ-2’ ತೆರೆ ಮೇಲೆ ತರುತ್ತಿದ್ದಾರೆ. ಇಲ್ಲಿ ಶ್ರೀನಗರ ಕಿಟ್ಟಿಗೆ ರಮ್ಯಾ ಬದಲು ರಚಿತಾ ರಾಮ್ ಜೋಡಿಯಾಗಿದ್ದಾರೆ. ಅಲ್ಲದೇ, ಮೊದಲ ಭಾಗದಲ್ಲಿ ಪೂರ್ತಿ ಲವ್‌ಸ್ಟೋರಿಯಾಗಿತ್ತು. ಎರಡನೇ ಭಾಗದಲ್ಲಿ ರೇಷ್ಮೆ ಬೆಳಗಾರರ ವಿಷಯವನ್ನಿಟ್ಟುಕೊಂಡು ನವೀರು ಪ್ರೇಮಕಥೆ ಹೇಳುವ ಮೂಲಕ ನಾಗಶೇಖರ್ ವಿಭಿನ್ನತೆ ಮೆರೆದಿದ್ದಾರೆ. 2025ರ ಜನವರಿ 10ರಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ‘ಮಳೆಯಂತೆ..’ ಹಾಡನ್ನು ನಟ ಸುದೀಪ್ ಇತ್ತೀಚೆಗೆ ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಈ ಹಾಡನ್ನು ಕವಿರಾಜ್ ರಚಿಸಿದ್ದು, ಗಾಯಕಿ ಸಂಗೀತ ರವೀಂದ್ರನಾಥನ್ ಧ್ವನಿಯಲ್ಲಿ ಮೂಡಿಬಂದಿದೆ. ವಿ. ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ಇನ್ನು ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿಚ್ಚಿಗಿಲಿಗಿಲಿ ವಿನೋದ್, ಸಂಪತ್‌ಕುಮಾರ್ ತಾರಾಗಣದಲ್ಲಿದ್ದಾರೆ.

ಕಥೆಯ ಎಳೆ ನೀಡಿದ್ದು ಸುದೀಪ್: ನಿರ್ದೇಶಕ ನಾಗಶೇಖರ್, ‘ರೇಷ್ಮೆ ಬೆಳಗಾರರ ಕುರಿತ ಗಹನವಾದ ವಿಚಾರ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ. ಜತೆಗೆ ಒಂದಷ್ಟು ಲವ್‌ಸ್ಟೋರಿ ಸೇರಿಸಲಾಗಿದೆ. ‘ಮಾಣಿಕ್ಯ’ ಶೂಟಿಂಗ್ ವೇಳೆ ಸುದೀಪ್ ಈ ಚಿತ್ರದ ಎಳೆ ನೀಡಿದ್ದರು. ಇಂತಹ ಕಥೆಗಳನ್ನು ನೀನು ಚೆನ್ನಾಗಿ ಮಾಡುತ್ತೀಯಾ ಎಂದಿದ್ದರು. ಹಾಗಾಗಿ, ಈ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಶಿಡ್ಲಘಟ್ಟದಿಂದ ಆರಂಭವಾಗುವ ಕಥೆ ಸ್ವಿಜರ್‌ಲ್ಯಾಂಡ್‌ಗೆ ಹೋಗುತ್ತದೆ. ಇದು ಬೇರೆಯದೇ ಪ್ಯಾಟ್ರನ್ ಸಿನಿಮಾ, ಈ ಹಿಂದೆ ಎರಡು ಸಾಂಗ್ ಬಿಟ್ಟೆದ್ದೆವು. ಇದೀಗ, ಮತ್ತೊಂದು ಸಾಂಗ್ ಬಿಡುಗಡೆಗೊಳಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ನಾಯಕ ಶ್ರೀನಗರ ಕಿಟ್ಟಿ, ‘ಈ ಚಿತ್ರದ ಪ್ರತಿ ಹಾಡಿಗೂ ಆದರದ್ದೇ ಆದ ಪ್ರಾಮುಖ್ಯತೆಯಿದೆ. ಶ್ರೀಧರ್ ಸುಂದರವಾಗಿ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ನಾನು ರೇಷ್ಮೆ ಬೆಳೆಗಾರನಾಗಿ ಕಾಣಿಸಿಕೊಂಡಿದ್ದೇನೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net