ಸಂಜನಾ ಸರಣಿ ಸಿನಿಮಾ; 2021ಕ್ಕೆ ಅರ್ಧ ಡಜನ್ ಸಿನಿಮಾ ಬಿಡುಗಡೆ

Sanjana
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳ ಕಾಲ ಸಿನಿಮಾರಂಗ ಸಂಪೂರ್ಣ ಸ್ತಬ್ಧವಾಗಿತ್ತು. ಇದೀಗ ನಿಧಾನಕ್ಕೆ ಹಳೇ ಲಯಕ್ಕೆ ಬರುತ್ತಿದೆಯಾದರೂ, ಮೊದಲಿನ ಥರದ ವೇಗ ಕಾಣಿಸುತ್ತಿಲ್ಲ. ಆದರೆ, 2021 ಮಾತ್ರ ಹಾಗಾಗಲ್ಲ. ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದು ಆಗಮಿಸುವ ಸಾಧ್ಯತೆ ಇದೆ. ಇತ್ತ ನಾಯಕಿಯ ವಿಚಾರಕ್ಕೆ ಬಂದರೆ, ನಟಿ ಸಂಜನಾ ಆನಂದ್ ಅವರ ಆರೇಳು ಸಿನಿಮಾಗಳು 2021ರಲ್ಲಿ ಬಿಡುಗಡೆ ಆಗಲಿವೆ!

ಹೌದು, ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಬಳಿಕ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡ ಸಂಜನಾ, ಈಗಾಗಲೇ ಐದು ಸಿನಿಮಾಗಳ ಶೂಟಿಂಗ್ ಮುಗಿಸಿದ್ದಾರೆ. ಅವುಗಳಲ್ಲಿ ಎಲ್ಲವೂ ಬಿಡುಗಡೆಗೆ ಸಿದ್ಧವಾಗಿವೆ. ಈಗಾಗಲೇ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ನಟಿಸುತ್ತಿದ್ದರೆ, ಜನವರಿಯಲ್ಲಿ ಎ.ಪಿ ಅರ್ಜುನ್ ನಿರ್ವಣದ ‘ಅದ್ಧೂರಿ ಲವರ್’ ಚಿತ್ರದ ಶೂಟಿಂಗ್​ನಲ್ಲಿ ಸಂಜನಾ ಭಾಗಿಯಾಗಲಿದ್ದಾರೆ.

ಕರೊನಾದಿಂದಾಗಿ ಈ ವರ್ಷ ನನ್ನ ಒಂದೇ ಒಂದು ಸಿನಿಮಾ ಬಿಡುಗಡೆ ಆಗಲಿಲ್ಲ. ಈ ವರ್ಷದ ನಮ್ಮ ಕೆಲಸ 2021ಕ್ಕೆ ಸಿಗಲಿದೆ. ಆರೇಳು ಸಿನಿಮಾಗಳು ಒಂದೇ ವರ್ಷದಲ್ಲಿ ತೆರೆಕಾಣಲಿವೆ. ಒಬ್ಬ ನಟಿಗೆ ಇದಕ್ಕಿಂತ ಖುಷಿಯ ವಿಚಾರ ಬೇರೆ ಏನು ಬೇಕಿದೆ? | ಸಂಜನಾ ಆನಂದ್ ನಟಿ

ಸಂಜನಾ ನಟಿಸಿರುವ ದುನಿಯಾ ವಿಜಯ್ ನಟನೆಯ ‘ಸಲಗ’, ಶೀತಲ್ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’, ಅಜಯ್ ರಾವ್ ಜತೆಗಿನ ‘ಶೋಕಿವಾಲಾ’, ‘ಕುಷ್ಕ’, ‘ಕ್ಷತ್ರೀಯ’ ಚಿತ್ರದ ಕೆಲಸಗಳೆಲ್ಲ ಮುಗಿದಿದ್ದು, ಈ ಎಲ್ಲ ಚಿತ್ರಗಳು ರಿಲೀಸ್​ಗೆ ಸಿದ್ಧವಾಗಿವೆ. ಅಷ್ಟೇ ಅಲ್ಲ, ಶಿವರಾಜ್​ಕುಮಾರ್ ಹೋಮ್ ಬ್ಯಾನರ್ ‘ಶ್ರೀಮುತ್ತು ಸಿನಿ ಸರ್ವಿಸಸ್’ ಅಡಿಯಲ್ಲಿ ನಿರ್ವಣವಾದ ‘ಹನಿಮೂನ್’ ವೆಬ್​ಸಿರೀಸ್​ನಲ್ಲಿಯೂ ಸಂಜನಾ ನಟಿಸಿದ್ದು, ಓಟಿಟಿಯಲ್ಲಿ ಬಿಡುಗಡೆ ಆಗಲಿದೆ. ವಿಶೇಷ ಏನೆಂದರೆ, ಕನ್ನಡದ ಜತೆಗೆ ತೆಲುಗಿನಲ್ಲೂ ಈ ವೆಬ್ ಸಿರೀಸ್ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net