ಡಬಲ್ ಆನಂದದಲ್ಲಿ ಸಂಜನಾ

samjana feb 18 2020
Published on

ಬೆಂಗಳೂರು: ನಟಿ ಸಂಜನಾ ಆನಂದ್​ಗೆ ಈ ಯುಗಾದಿ ಮತ್ತಷ್ಟು ಆನಂದಮಯವಾಗಿರಲಿದೆ. ಏಕೆಂದರೆ ಅವರ ಅಭಿನಯದ 2 ಸಿನಿಮಾ ಯುಗಾದಿ ಆಸುಪಾಸಲ್ಲೇ ಬಿಡುಗಡೆ ಆಗಲಿವೆ. ಆ ಮೂಲಕ ಯುಗಾದಿ ಸಂಭ್ರಮದ ಆನಂದ ಅವರ ಪಾಲಿಗೆ ದುಪ್ಪಟ್ಟಾಗಿರಲಿದೆ. ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಮೂಲಕ ಡಾ. ಟಿ.ಆರ್. ಚಂದ್ರಶೇಖರ್ ನಿರ್ವಿುಸಿರುವ ಜಾಕಿ ಅವರ ಚೊಚ್ಚಲ ನಿರ್ದೇಶನದ ‘ಶೋಕಿವಾಲಾ’ ಚಿತ್ರದ ಶೂಟಿಂಗ್ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ.

ನಾಯಕ ನಟ ಅಜಯ್ ರಾವ್​ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ‘ಶೋಕಿವಾಲಾ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮುಂದಿನ ವಾರ ಮೇಕಿಂಗ್ ಟೀಸರ್ ರಿಲೀಸ್ ಮಾಡುತ್ತೇವೆ. ನಂತರ ಚಿತ್ರದ 4 ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡಲಾಗುವುದು. ಯುಗಾದಿ ಸಂದರ್ಭದಲ್ಲಿ ಚಿತ್ರ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದಿದ್ದಾರೆ ನಿರ್ದೇಶಕ ಜಾಕಿ. ‘ಇದೊಂದು ಲವ್-ಕಾಮಿಡಿ ಸಿನಿಮಾ. ನಾಯಕನಿಗೆ ಲವ್ ಮಾಡಿಯೇ ಮದುವೆ ಆಗಬೇಕೆಂಬ ಆಸೆ. ಅದಕ್ಕಾಗಿ ಆತ ಹಲವು ಹುಡುಗಿಯರ ಹಿಂದೆ ಬೀಳುತ್ತಾನೆ. ಇನ್ನೊಂದೆಡೆ ನಾಯಕಿಗೆ ಒಂದಷ್ಟು ಹುಡುಗರು ಬೆನ್ನು ಬಿದ್ದಿರುತ್ತಾರೆ. ಅವರನ್ನೆಲ್ಲ ಎದುರಿಸಿ ನಾಯಕ ಹೇಗೆ ನಾಯಕಿಯನ್ನು ಮದುವೆ ಆಗುತ್ತಾನೆ ಎಂಬುದೇ ಕಥಾಹಂದರ’ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಸಂಜನಾ ಕಾಲೇಜು ವಿದ್ಯಾರ್ಥಿನಿಯ ಪಾತ್ರ ಮಾಡಿದ್ದರೂ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ‘ನನ್ನದು ಇಲ್ಲಿ ಒಂಥರಾ ಬಜಾರಿಯ ಪಾತ್ರ. ಪಕ್ಕಾ ಗ್ರಾಮೀಣ ಪ್ರದೇಶದ ಹುಡುಗಿ ಆಗಿ ಅಭಿನಯಿಸಿದ್ದೇನೆ’ ಎನ್ನುತ್ತಾರೆ ಸಂಜನಾ. ಮತ್ತೊಂದೆಡೆ ಕೆ.ಪಿ. ಶ್ರೀಕಾಂತ್ ನಿರ್ವಣ, ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ‘ಸಲಗ’ ಚಿತ್ರದಲ್ಲೂ ಸಂಜನಾ ನಾಯಕಿ. ನಾಯಕರಾಗಿಯೂ ನಟಿಸಿರುವ ದುನಿಯಾ ವಿಜಿಗೆ ಸಂಜನಾ ಜೋಡಿ. ಈ ಚಿತ್ರವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ ‘ಸಲಗ’ ಸಿನಿಮಾ ಕೂಡ ಯುಗಾದಿ ಆಸುಪಾಸಿನಲ್ಲಿ ಅಂದರೆ ಮಾರ್ಚ್​ನಲ್ಲೇ ಬಿಡುಗಡೆ ಆಗಲಿದೆ. ಇನ್ನು ಕಳೆದ ವರ್ಷ ಯುಗಾದಿಗೆ ಕೆಲವೇ ದಿನಗಳ ಮುನ್ನ ತೆರೆ ಕಂಡಿದ್ದ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸಂಜನಾ ಸ್ಯಾಂಡಲ್​ವುಡ್​ಗೆ ಪ್ರವೇಶಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net